ದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ಮಧ್ಯ ಕರ್ನಾಟಕದ ಕೇಂದ್ರ ಬಿಂದು. ಪ್ರಗತಿಯತ್ತ ಸಾಗುತ್ತಿರುವ ದಾವಣಗೆರೆಯಲ್ಲಿ ಐಟಿಬಿಟಿ ಕಂಪನಿಗಳು ಕರೆತರಲು ಇಲ್ಲಿಲ್ಲದ ಕಸರತ್ತು ನಡೆಯುತ್ತಿದೆ.
ಐಟಿ ಹಬ್ ಆಗಿ ಹೊರಹೊಮ್ಮವ ಎಲ್ಲ ರೀತಿಯ ಸಾಮರ್ಥ್ಯ ದಾವಣಗೆರೆಗಿದೆ. ಈಗಾಗಲೇ ಎಸ್ಟಿಪಿಐ ಉಪ ಕೇಂದ್ರ ಈ ಜಿಲ್ಲೆಯಲ್ಲಿದೆ. ಇಲ್ಲಿ ಐಟಿ ಪಾರ್ಕ್ ಆರಂಭಕ್ಕೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ನಾಲ್ಕೈದು ಕಡೆ ಸ್ಥಳವನ್ನು ಗುರುತಿಸಿದ್ದಾರೆ.
ಎರಡು ಎಕರೆ ಜಮೀನು, ವಿಶಾಲವಾದ ಕಟ್ಟಡದ ಬೇಡಿಕೆ: ದಾವಣಗೆರೆಯಲ್ಲಿ ಐಟಿ ಪಾರ್ಕ್ ಆರಂಭಿಸಲು ಎರಡು ಎಕರೆ ಜಾಗ ಸೇರಿದಂತೆ, ಆ ಜಾಗದಲ್ಲಿ 50 ಸಾವಿರ ಚದರ ಅಡಿ ಪ್ರದೇಶದ ಕಟ್ಟಡ ಬೇಕಾಗಿದೆ ಎಂದು ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಕೇಂದ್ರ ಸಚಿವ ಜಿತಿನ್ ಪ್ರಸಾದ್ ಸಂಸತ್ತಿನಲ್ಲಿ ಹೇಳಿದ್ದರು. ಇದಕ್ಕೆ ವ್ಯವಸ್ಥೆ ಮಾಡಿಸುವುದಾಗಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ತಿಳಿಸಿದ್ದರು.
“ದಾವಣಗೆರೆ ಜಿಲ್ಲಾಧಿಕಾರಿ ಡಾ. ಗಂಗಾಧರ್ ಸ್ವಾಮಿ ಜಿಎಂ ಅವರ ನೇತೃತ್ವದಲ್ಲಿ ನಾಲ್ಕೈದು ಕಡೆ ಸ್ಥಳ ಗುರುತಿಸಲಾಗಿದೆ. ಬೆಂಗಳೂರು ಎಸ್ಟಿಪಿಐ ಕೇಂದ್ರ ಕಚೇರಿಯ ಅಧಿಕಾರಿಗಳು ದಾವಣಗೆರೆ ವಿಶ್ವವಿದ್ಯಾನಿಲಯ, ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜ್, ಸ್ಮಾರ್ಟ್ ಸಿಟಿ ಕಟ್ಟಡ ಹೀಗೆ ವಿವಿಧ ಕಡೆ ಸ್ಥಳಕ್ಕೆ ಭೇಟಿ ನೀಡಿ ಐಟಿ ಪಾರ್ಕ್ ಆರಂಭಿಸಲು ಸ್ಥಳ ಪರಿಶೀಲನೆ ಮಾಡಿದ್ದಾರೆ” ಎಂದು ಸಂಸದೆ ತಿಳಿಸಿದ್ದಾರೆ.
“ಐಟಿ ಪಾರ್ಕ್ ಆರಂಭಿಸಿದರೆ ದಾವಣಗೆರೆಯ ಇಂಜಿನಿಯರಿಂಗ್ ಪದವೀಧರರು ಅಲ್ಲದೇ ನೆರೆಯ ಚಿತ್ರದುರ್ಗ, ಬಳ್ಳಾರಿ, ಶಿವಮೊಗ್ಗ, ಜಿಲ್ಲೆಗಳ ಪದವೀಧರರ ವಲಸೆ ಹೋಗುವುದು ತಪ್ಪಿಸಬಹುದು. ಅಲ್ಲದೇ ಪ್ರಾದೇಶಿಕ ಅಭಿವೃದ್ಧಿಗೆ ಉತ್ತೇಜನ ನೀಡಿದಂತಾಗುತ್ತದೆ. ಐಟಿ ಪಾರ್ಕ್ ಆರಂಭವಾದರೆ ದಾವಣಗೆರೆಗೆ ಬರಲು ಹೋಗಲು ವಂದೇ ಭಾರತ್ ರೈಲು ಸೇವೆ ಇದೆ. ಕೇವಲ ಒಂದೂವರೆ ಗಂಟೆ ಕ್ರಮಿಸಿದರೆ ಶಿವಮೊಗ್ಗ, ಹುಬ್ಬಳ್ಳಿ ವಿಮಾನ ನಿಲ್ದಾಣಗಳಿವೆ. ಹೀಗೆ ಎಲ್ಲ ರೀತಿ ಸೌಲಭ್ಯ ಕಲ್ಪಿಸಲಾಗುವುದು” ಎಂದು ಸಂಸದೆ ಡಾ ಪ್ರಭಾ ಮಲ್ಲಿಕಾರ್ಜುನ ಮಾಹಿತಿ ನೀಡಿದ್ದಾರೆ.