ನಿರಂತರ ಮಳೆಗೆ ಧಾರವಾಡದಲ್ಲಿ ಮೊಳಕೆಯೊಡೆಯುತ್ತಿವೆ ಹೆಸರು ಬೆಳೆ.. ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಿದ ವರುಣರಾಯ.
: ಧಾರವಾಡ ಜಿಲ್ಲೆಯಲ್ಲಿ ಸದ್ಯ ಭಾಗಶಃ ಹೆಸರು ಬೆಳೆ ಈಗ ಕಟಾವಿಗೆ ಬಂದಿದೆ. ಆದರೆ, ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಅನ್ನದಾತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು! ಧಾರವಾಡ ಜಿಲ್ಲೆಯಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಕಟಾವಿಗೆ ಬಂದ ಹೆಸರು ಬೆಳೆ ಇದ್ದ ಜಾಗದಲ್ಲೇ ಮೊಳಕೆಯೊಡೆಯಲಾರಂಭಿಸಿವೆ. ಇನ್ನೇನು ಹೆಸರು ಬೆಳೆ ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ಆರಂಭವಾದ ಮಳೆ ರೈತನ ಕಣ್ಣೀರಿಗೆ ಕಾರಣವಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಹೆಸರು, ಉದ್ದು, ಸೋಯಾಬಿನ್ ಹಾಗೂ ಶೇಂಗಾ ಬೆಳೆಯನ್ನು ಹೆಚ್ಚು ಬೆಳೆಯಲಾಗುತ್ತದೆ.
ಹೆಸರು ಬೆಳೆ ಸದ್ಯ ಕಟಾವಿಗೆ ಬಂದಿದೆ. ಆದರೆ, ರೈತನ್ನು ಹೊಲಕ್ಕೆ ಹೋಗಲು ಈ ಮಳೆ ಬಿಡುತ್ತಿಲ್ಲ. ಮಳೆ ಆಗಿಯೂ ಕೆಡಿಸಿತು ಹೋಗಿಯೂ ಕೆಡಿಸಿತು ಎನ್ನುವಂತಾಗಿದೆ ರೈತನ ಪರಿಸ್ಥಿತಿ. ಉದ್ದಿನ ಬೆಳೆ ಕೂಡ ಇನ್ನು 15 ದಿನದಲ್ಲಿ ಕಟಾವಿಗೆ ಬರುತ್ತದೆ. ಅಲ್ಲಲ್ಲಿ ಉದ್ದು ಸಹ ಈಗ ಒಣಗಲಾರಂಭಿಸಿತ್ತು ಆದರೆ, ಈ ಮಳೆ ಅದಕ್ಕೂ ಕುತ್ತು ತಂದಿದೆ. ಇನ್ನು ಶೇಂಗಾ ಬೆಳೆಗೆ ಸದ್ಯ ಬಿಸಿಲಿನ ಅವಶ್ಯಕತೆ ಇತ್ತು. ನೀರಲ್ಲೇ ಶೇಂಗಾ ಬೆಳೆ ನಿಲ್ಲುವಂತಾಗಿದೆ. ಜಿಲ್ಲೆಯ ಅನೇಕ ಭಾಗಗಳಲ್ಲಿ ಹೆಸರು ಕಟಾವಿಗೆ ಬಂದರೂ ಆ ಫಸಲನ್ನು ತೆಗೆದುಕೊಳ್ಳಲಾರದಂತಹ ಸ್ಥಿತಿ ನಿರ್ಮಾಣವಾಗಿದ್ದು, ರೈತ ತಲೆ ಮೇಲೆ ಕೈ ಹೊತ್ತು ಕುಳಿತಿರುವುದಂತೂ ಸುಳ್ಳಲ್ಲ.