ಬೆಂಗಳೂರು: “ಧರ್ಮಸ್ಥಳದಲ್ಲಿ ನಡೆದಿದೆ ಎಂದು ಆರೋಪಿಸಲಾಗುತ್ತಿರುವ ನೂರಾರು ಕೊಲೆಗಳು, ಅತ್ಯಾಚಾರಗಳು ಆಧಾರರಹಿತ ಮತ್ತು ಸುಳ್ಳು” ಎಂದು ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಮಂಗಳವಾರ ಸ್ಪಷ್ಟಪಡಿಸಿದರು.
ಕಳೆದ ಎರಡು ದಶಕಗಳಲ್ಲಿ ಧರ್ಮಸ್ಥಳದಾದ್ಯಂತ ನಡೆದಿವೆ ಎನ್ನಲಾದ ಬಹು ಕೊಲೆಗಳು, ಅತ್ಯಾಚಾರ ಆರೋಪಗಳನ್ನು ತಳ್ಳಿ ಹಾಕಿರುವ ಅವರು, ಸತ್ಯ ಬೆಳಕಿಗೆ ಬರಲು ಎಸ್‌ಐಟಿ ತನಿಖೆಯನ್ನು ಸ್ವಾಗತಿಸಿದರು. ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಕೊಲೆ, ಅತ್ಯಾಚಾರ ಆರೋಪಗಳ ಕುರಿತು ಎಸ್‌ಐಟಿ ತನಿಖೆ ನಡೆಸುತ್ತಿರುವ ನಡುವೆ ಅವರ ಈ ಹೇಳಿಕೆ ಬಂದಿರುವುದು ಮಹತ್ವದ್ದಾಗಿದೆ.
ಪಿಟಿಐಗೆ ವಿಶೇಷ ಸಂದರ್ಶನ ನೀಡಿರುವ ಹೆಗ್ಗಡೆ ಅವರು, “ಕೇಳಿ ಬರುತ್ತಿರುವ ಎಲ್ಲ ಆರೋಪಗಳು ಆಧಾರರಹಿತ ಮತ್ತು ಸುಳ್ಳಿನಿಂದ ಕೂಡಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಧರ್ಮಕ್ಷೇತ್ರದ ಬಗ್ಗೆ ಬಿಂಬಿಸುವ ರೀತಿಯು ನನಗೆ ನಿಜವಾಗಿಯೂ ನೋವು ತಂದಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಎಸ್‌ಐಟಿ ತನಿಖೆಯಿಂದ ಸತ್ಯ ಬಯಲಿಗೆ: ಮುಸುಕುಧಾರಿ ವ್ಯಕ್ತಿಯು ನೀಡಿದ ಮಾಹಿತಿಯ ಆಧಾರದ ಮೇಲೆ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಶವ ಶೋಧದ ಬಗ್ಗೆ ಪ್ರತಿಕ್ರಿಯಿಸಿದ ಧರ್ಮಾಧಿಕಾರಿ, “ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿದಾಗಲೇ ನಾವು ಅದನ್ನು ಸ್ವಾಗತಿಸಿದೆವು. ತನಿಖೆಯಿಂದ ಸತ್ಯ ಹೊರ ಬರಲಿದೆ. ಧರ್ಮಕ್ಷೇತ್ರದ ಮೇಲೆ ಬಂದಿರುವ ಕಳಂಕವೂ ದೂರವಾಗಬೇಕು” ಎಂದು ಹೇಳಿದರು.
“ಎಸ್‌ಐಟಿ ತನಿಖೆ ತ್ವರಿತಗತಿಯಲ್ಲಿ ಸಾಗಲಿ ಅವರು ಮನವಿ ಮಾಡಿದ ಅವರು, ಇದರಿಂದ ಎಲ್ಲ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ. ವಿಶೇಷವಾಗಿ ನಮ್ಮ ಮೇಲೆ ಬಂದಿರುವ ಆರೋಪವೂ ದೂರವಾಗಲಿದೆ. ಎಸ್‌ಐಟಿ ಸಂಪೂರ್ಣವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಲಿ” ಎಂದು ಕೋರಿದರು.
ಧರ್ಮಸ್ಥಳದ ವಿರುದ್ಧ ಸಂಘಟಿತ ಅಭಿಯಾನ: “ಧರ್ಮಸ್ಥಳ ಮತ್ತು ಅದರ ಟ್ರಸ್ಟ್ ಅನ್ನು ಗುರಿಯಾಗಿಸಿಕೊಂಡು 14 ವರ್ಷಗಳಿಗೂ ಹೆಚ್ಚು ಕಾಲದಿಂದ ಸಂಘಟಿತ ಅಭಿಯಾನ ನಡೆಸಲಾಗುತ್ತಿದೆ ಎಂದು ಆರೋಪಿಸಿದ ಅವರು, ನಾವು ಮಾಡುತ್ತಿರುವ ಒಳ್ಳೆಯ ಕೆಲಸಗಳಿಂದ ಕೋಪಗೊಂಡ ಕೆಲವು ವ್ಯಕ್ತಿಗಳು ಸುಳ್ಳು ಪ್ರಚಾರಗಳನ್ನು ನಡೆಸುತ್ತಿದ್ದಾರೆ. ಆದರೆ, ನಾವು ಇದರಿಂದ ವಿಚಲಿತರಾಗುವುದಿಲ್ಲ” ಎಂದರು.
ಧರ್ಮಸ್ಥಳದಲ್ಲಿ ಶವಗಳನ್ನು ಸಮಾಧಿ ಮಾಡಿರುವುದಾಗಿ ಮುಸಕುಧಾರಿ ವ್ಯಕ್ತಿಯೊಬ್ಬ ನೀಡಿರುವ ವಿಡಿಯೋದ ಬಗ್ಗೆ ಪ್ರತಿಕ್ರಿಯಿಸಿದ ಧರ್ಮಾಧಿಕಾರಿ, “ಇದು ಅಸಾಧ್ಯ. ಧರ್ಮಸ್ಥಳದಲ್ಲಿ ಮೃತಪಟ್ಟರೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಇದೆ. ಇಲ್ಲಿ ಸಾವು ಸಂಭವಿಸಿದಾಗಲೆಲ್ಲಾ ನಾವು ಗ್ರಾಮ ಪಂಚಾಯತ್‌ಗೆ ತಿಳಿಸುತ್ತಿದ್ದೆವು. ಅವರು ಸರಿಯಾದ ಕ್ರಮ ವಹಿಸಿ ಶವವನ್ನು ಅಂತ್ಯ ಸಂಸ್ಕಾರ ಮಾಡುತ್ತಿದ್ದರು” ಎಂದು ಸ್ಪಷ್ಟಪಡಿಸಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ಅಪಪ್ರಚಾರ: ಸಾಮಾಜಿಕ ಮಾಧ್ಯಮಗಳಲ್ಲಿ ಬಿಂಬಿಸಲಾಗುತ್ತಿರುವ ರೀತಿಗೆ ತೀವ್ರ ಬೇಸರಿಸಿದ ಹೆಗ್ಗಡೆ ಅವರು, “ಧರ್ಮಕ್ಷೇತ್ರದ ಬಗ್ಗೆ ಯುವಕರಲ್ಲಿ ವಿಷಬೀಜ ಬಿತ್ತಲಾಗುತ್ತಿದೆ. ಧರ್ಮ ನಂಬಿಕೆಯಿಂದ ಅವರು ದೂರ ಉಳಿಯುವಂತೆ ಪ್ರೇರೇಪಿಸಲಾಗುತ್ತಿದೆ. ಆರೋಪಗಳ ಕುರಿತು ಚಿತ್ರಿಸಿದ ರೀತಿ ನಮಗೆ ಆಘಾತ ಮತ್ತು ಆಶ್ಚರ್ಯ ತಂದಿದೆ. ಸಾಮಾಜಿಕ ಬದ್ಧತೆಯ ಅನುಸಾರ ಟ್ರಸ್ಟ್ ಕೆಲಸ ಮಾಡುತ್ತಿದೆ” ಎಂದು ಹೇಳಿದರು.
ಸೌಜನ್ಯ ಕೊಲೆ ಪ್ರಕರಣದಲ್ಲಿ ಎದ್ದಿರುವ ನ್ಯಾಯದ ಕೂಗಿಗೆ ಪ್ರತಿಕ್ರಿಯಿಸಿದ ಹೆಗ್ಗಡೆ ಅವರು, “ಅಂತಹ ಘಟನೆ ನಡೆದಿದೆ ಎಂದು ನಮಗೆ ತಿಳಿದಾಗ ನಾವು ಅದೇ ದಿನ ಸರ್ಕಾರಕ್ಕೆ ಮಾಹಿತಿ ನೀಡಿದ್ದೇವೆ. ನಮ್ಮ ಕುಟುಂಬದ ಮೇಲಿನ ಆರೋಪಗಳು ಆಧಾರರಹಿತವಾಗಿವೆ. ಅವರು ಆರೋಪಿಸಿರುವ ನಮ್ಮ ಕುಟುಂಬ ಸದಸ್ಯರು ಶಿಕ್ಷಣಕ್ಕಾಗಿ ವಿದೇಶದಲ್ಲಿದ್ದರು. ನಾವು ಈ ಕುರಿತ ದಾಖಲೆಗಳನ್ನು ಸಲ್ಲಿಸಿದ್ದೇವೆ. ಇದೆಲ್ಲರೂ ಸುಳ್ಳು ಪ್ರಚಾರಗಳಾಗಿವೆ ಎಂದು ಆರೋಪವನ್ನು ತಳ್ಳಿ ಹಾಕಿದರು. ಪ್ರಕರಣದಲ್ಲಿ ಸಿಬಿಐ ತನಿಖೆ ಕೂಡ ನಡೆದಿದೆ. ಅದಕ್ಕೂ ನಾವು ಸಹಕರಿಸಿದ್ದೇವೆ. ಎಲ್ಲಾ ರೀತಿಯ ತನಿಖೆಗಳಿಗೂ ನಾವು ಸಿದ್ಧರಿದ್ದೇವೆ” ಎಂದರು.