ಚಾಮರಾಜನಗರ: ಪ್ರಸಿದ್ಧ ಧಾರ್ಮಿಕ ಸ್ಥಳವಾದ ಹನೂರು ತಾಲೂಕಿನ ಮಲೆ ಮಾದೇಶ್ವರ ಬೆಟ್ಟದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ಇಡೀ ಕ್ಷೇತ್ರ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದೆ.
ಭೀಮನ ಅಮವಾಸ್ಯೆ ಪ್ರಯುಕ್ತ ದೇವಾಲಯ ಸೇರಿದಂತೆ ವಿವಿಧ ಕಡೆಗಳಲ್ಲಿ ವೈವಿಧ್ಯಮಯವಾಗಿ ದೀಪಾಲಂಕಾರ ಮಾಡಲಾಗಿದ್ದು ಭಕ್ತರ ಕಣ್ಮನ ಸೆಳೆಯುತ್ತಿದೆ. ಶ್ರಾವಣ ಮಾಸದ ಮೊದಲ ದಿನವಾಗಿದ್ದು, ಈ ದಿನ ಕ್ಷೇತ್ರದಲ್ಲಿ ವಿಶೇಷ ಪೂಜೆ ನಡೆಯಲಿದ್ದು, ಈಗಾಗಲೇ ಸಹಸ್ರಾರು ಮಂದಿ ಭಕ್ತರು ಬರುತ್ತಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಾದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ನಡೆಯುತ್ತಿರುವ ಭೀಮನ ಅಮಾವಾಸ್ಯೆ ಪೂಜಾ ಕಾರ್ಯಕ್ರಮ ಹಾಗೂ ಎಣ್ಣೆಮಜ್ಜನ ಸೇವೆ ನಡೆದಿದ್ದು, ವಿಶೇಷ ಅಭಿಷೇಕ ಪೂಜಾ ಕಾರ್ಯಕ್ರಮಗಳು ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಜರುಗಿದೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ತಮಿಳುನಾಡಿನ ಹೊಸೂರು ಗ್ರಾಮದ ಉದ್ಯಮಿ ರಮೇಶ್ ಗೌಡ ಎಂಬವರು ಆರು ಟನ್ ವಿವಿಧ ಬಗೆಯ ಹೂಗಳಿಂದ ವಿಶೇಷವಾಗಿ ಅಲಂಕಾರವನ್ನು ಮಾಡಿಸಿದ್ದಾರೆ. ಭೀಮನ ಅಮಾವಾಸ್ಯೆಗೆ ರಾಜ್ಯ ಹಾಗೂ ತಮಿಳುನಾಡಿನಿಂದ ಅಪಾರ ಸಂಖ್ಯೆಯ ಭಕ್ತಾದಿಗಳು ಮಾದಪ್ಪನ ದರ್ಶನ ಪಡೆಯಲು ಬರುವುದರಿಂದ ವಿಶೇಷ ಸರತಿ ಸಾಲು, ದಾಸೋಹ ವ್ಯವಸ್ಥೆ, ಶೌಚಾಲಯಗಳ ವ್ಯವಸ್ಥೆ, ಕುಡಿಯುವ ನೀರಿನ ಸೌಕರ್ಯಕ್ಕೆ ಪ್ರಾಧಿಕಾರ ಕ್ರಮ ಕೈಗೊಂಡಿದೆ.
ಭಕ್ತಾದಿಗಳ ಸುರಕ್ಷತೆ ದೃಷ್ಟಿಯಿಂದ ದೇವಾಲಯ ಬಸ್ ನಿಲ್ದಾಣ ಹಾಗೂ ಕ್ಷೇತ್ರ ವ್ಯಾಪ್ತಿಯ ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.