ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಜಗದೀಶ್ ವಿರುದ್ಧ ಭಾರತೀನಗರ ಠಾಣೆ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ಧಾರೆ.
ಜುಲೈ 15ರಂದು ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಇದುವರೆಗೂ 12 ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ಬೆಳಕಿಗೆ ಬಂದಾಗಿನಿಂದಲೂ ಆರೋಪಿ ಜಗದೀಶ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ತೀವ್ರ ಶೋಧ ನಡೆಸಿದರೂ ಸುಳಿವು ಸಿಕ್ಕಿಲ್ಲ. ಹೀಗಾಗಿ, ಆತನ ಇರುವಿಕೆ ಬಗ್ಗೆ ಮಾಹಿತಿ ಪಡೆಯುವ ಸಲುವಾಗಿ ಲುಕ್ ಔಟ್ ಸಕ್ಯೂರ್ಲರ್ (ಎಲ್ಓಸಿ ) ಜಾರಿ ಮಾಡಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ದೇವರಾಜ್ ತಿಳಿಸಿದ್ದಾರೆ.
ವಿದೇಶದಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ: ಹತ್ಯೆಗೂ ಮುನ್ನವೇ ಆರೋಪಿ ಜಗದೀಶ್ ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ಟ್ರಾವೆಲ್ ಹಿಸ್ಟರಿಯನ್ನು ಕಲೆ ಹಾಕಿದ್ದಾರೆ. ಬೆಂಗಳೂರಿನಿಂದ ಕೇರಳ, ತಮಿಳುನಾಡು ಬಳಿಕ ಉತ್ತರಾಖಂಡ್ಗೆ ತೆರಳಿ ಅಲ್ಲಿಂದ ವಿದೇಶಕ್ಕೆ ಹೋಗಿರುವ ಬಗ್ಗೆ ಕಂಡುಕೊಂಡಿದ್ದಾರೆ. ವಿದೇಶದಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ಹಿನ್ನೆಲೆಯಲ್ಲಿ ದೇಶದ ಎಲ್ಲಾ ಏರ್ಪೋರ್ಟ್ಗಳು, ಅಂತಾರಾಷ್ಟ್ರೀಯ ಭೂ ಗಡಿ ಪ್ರದೇಶ ಹಾಗೂ ಬಂದರುಗಳಿಗೆ ಪ್ರಕರಣದ ಪೂರ್ಣ ವಿವರಗಳನ್ನು ನೀಡಲಾಗಿದೆ ಎಂದು ಪೊಲೀಸರು ಹೇಳಿದ್ಧಾರೆ.
Laxmi News 24×7