ಕಾರವಾರ (ಉತ್ತರಕನ್ನಡ): ಬೆಳ್ಳಂಬೆಳಗ್ಗೆ ಖಾಸಗಿ ಬಸ್ವೊಂದು ಹಳ್ಳಕ್ಕೆ ಬಿದ್ದು, ಓರ್ವ ಪ್ರಯಾಣಿಕ ಸಾವನ್ನಪ್ಪಿ, ಐವರು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಸೋಮವಾರ ಸಂಭವಿಸಿದೆ.
ಸೇತುವೆಯಿಂದ ಹಳ್ಳಕ್ಕೆ ಅಡ್ಡಲಾಗಿ ಬಿದ್ದ ಬಸ್ : ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಅಗಸೂರು ಬಳಿ ಖಾಸಗಿ ಸ್ಲೀಪರ್ ಬಸ್ ಚಾಲಕನ ನಿಯಂತ್ರಣ ತಪ್ಪಿ, ಸೇತುವೆಯಿಂದ ಹಳ್ಳಕ್ಕೆ ಅಡ್ಡಲಾಗಿ ಬಿದ್ದಿದೆ. ಬಸ್ನಲ್ಲಿದ್ದ 18 ಮಂದಿ ಪ್ರಯಾಣಿಕರ ಪೈಕಿ ಓರ್ವ ಮೃತಪಟ್ಟಿದ್ದು, ಐವರಿಗೆ ಗಂಭೀರ ಗಾಯಗಳಾಗಿದೆ. ಗಾಯಾಳುಗಳಿಗೆ ಅಂಕೋಲಾ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸ್ನಲ್ಲಿ ಸಿಲುಕಿದ್ದ ಪ್ರಯಾಣಿಕ ಸಾವು : ಕ್ರೇನ್ ಮೂಲಕ ಬಸ್ ಮೇಲಕ್ಕೆತ್ತಲು ಮುಂದಾಗಿದ್ದ ವೇಳೆ ಬಸ್ಸಿನಲ್ಲಿ ಸಿಲುಕಿದ್ದ ಓರ್ವ ಪ್ರಯಾಣಿಕ ಕೊನೆಯುಸಿರೆಳೆದಿರುವುದು ಕಂಡು ಬಂದಿದೆ. ಪ್ರಯಾಣಿಕನ ಶವವನ್ನು ಕ್ರೇನ್ ಮೂಲಕ ಮೇಲಕ್ಕೆತ್ತಲಾಗಿದ್ದು, ಆತ ಎಲ್ಲಿಯವನು ಎನ್ನುವ ಕುರಿತು ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.