ಬಾಗಲಕೋಟೆ: ಮಹಿಳೆಯರು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಮಹಿಳಾ ಸಂಘಟನೆಯೊಂದು ಸಾಕ್ಷಿಯಾಗಿದೆ. ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಕಟಗೇರಿ ಗ್ರಾಮದಲ್ಲಿರುವ ಚಾಮುಂಡೇಶ್ವರಿ ಸಂಜೀವಿನಿ ಮಹಿಳಾ ಸಂಘಟನೆ ಮಹಿಳಾ ವರ್ಗಕ್ಕೆ ಮಾದರಿಯಾಗಿದೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಒಕ್ಕೂಟ ಸ್ಥಾಪನೆ ಮಾಡಿ, ಮಹಿಳೆಯರಿಗೆ ಸ್ವಾವಲಂಬನೆ ಬದುಕು ನಿರ್ಮಿಸುವ ಮೂಲಕ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದಕೊಂಡ ರಾಜ್ಯದ ಏಕೈಕ ಮಹಿಳಾ ಸಂಘಟನೆ ಎಂಬ ಗರಿ ಪಡೆದಿದೆ.
ದೀನದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಲ್ಲಿ ಕಟಗೇರಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಕ್ಕೆ ರಾಷ್ಟ್ರಮಟ್ಟದ ಆತ್ಮ ನಿರ್ಭರ್ ಸಂಘಟನಾ ಪ್ರಶಸ್ತಿ ಲಭಿಸಿದೆ. ಈ ಮಹಿಳಾ ಒಕ್ಕೂಟದಲ್ಲಿ 1,400 ಕುಟುಂಬಗಳನ್ನು ಸಂಘಟಿಸಿ, 112 ಸ್ವ ಸಹಾಯ ಸಂಘಗಳು ಕಾರ್ಯನಿರ್ವಹಿತ್ತಿವೆ.
20 ರೂಪಾಯಿಗಳ ಸಂಗ್ರಹ ಮೂಲಕ ಪ್ರಾರಂಭವಾದ ಈ ಸಂಘಟನೆ ಇಂದು 2 ಕೋಟಿಗೂ ಅಧಿಕ ಹಣ ಸಂಗ್ರಹಿಸಿ, ಮಹಿಳೆಯರ ಆರ್ಥಿಕ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ಜಿಲ್ಲಾ ಪಂಚಾಯತ್ ಮೂಲಕ ಪಡೆದುಕೊಂಡು, ಮಹಿಳೆಯರು ವಿವಿಧ ಉದ್ಯೋಗದಲ್ಲಿ ತೊಡಗಿಸಿಕೊಂಡು ಇಂದು ಸ್ವಾವಲಂಬನೆ ಜೀವನ ಸಾಗಿಸುತ್ತಿದ್ದಾರೆ.
ಜಿಲ್ಲಾ ಪಂಚಾಯತ್ನ ಸ್ವಉದ್ಯೋಗ ಕೌಶಲ್ಯ ತರಬೇತಿ ಪಡೆದುಕೊಂಡು ಸುತ್ತು ನಿಧಿ, ಸಮುದಾಯದ ಬಂಡವಾಳ ನಿಧಿ, ದುರ್ಬಲ ವರ್ಗದವರ ನಿಧಿ ಹಾಗೂ ಕಾರ್ಯ ಸಾಧ್ಯ ಅಂತರ ನಿಧಿ ಸೇರಿ ಒಟ್ಟು 25 ಲಕ್ಷ ಅನುದಾನ ಹಾಗೂ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಪಡೆದುಕೊಂಡು ವಿವಿಧ ಜೀವನೋಪಾಯ ಚಟುವಟಿಕೆಗಳನ್ನು ತೊಡಗಿಸಿಕೊಂಡಿದ್ದಾರೆ.
ಅಲ್ಲದೆ ಗ್ರಾಮ ಪಂಚಾಯತ್ನಲ್ಲಿ ಘನ ತಾಜ್ಯ ನಿರ್ವಹಣೆಯನ್ನು ಮಹಿಳೆಯರೇ ನಿರ್ವಹಿಸುತ್ತಿದ್ದಾರೆ. ಇವುಗಳ ಜೊತೆಗೆ ಸಾಮಾಜಿಕ ಚಟುವಟಿಕೆಗಳಾದ ಲಿಂಗತ್ವ, ಪೋಷಣಾ ಹಾಗೂ ಪರಿವರ್ತನೆ ಅಭಿಯಾನದ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಎಲ್ಲಾ ಕಾರ್ಯ ಚಟುವಟಿಕೆಗಳಿಂದ ರಾಷ್ಟ್ರ ಮಟ್ಟದ ಉತ್ತಮ ಸಂಘಟನಾ ಪ್ರಥಮ ಪ್ರಶಸ್ತಿ ಲಭಿಸಿದೆ.