ಗಂಗಾವತಿ(ಕೊಪ್ಪಳ): ಕಳೆದ ಹಲವು ದಿನಗಳ ಹಿಂದೆ ಪರಸ್ಪರ ವಾಗ್ವಾದ ಮಾಡಿಕೊಂಡಿದ್ದ ಮಾಜಿ ಸಚಿವ ಶ್ರೀರಾಮುಲು ಮತ್ತು ಗಂಗಾವತಿಯ ಹಾಲಿ ಶಾಸಕ ಜಿ.ಜನಾರ್ದನ ರೆಡ್ಡಿ ಮುನಿಸು ಮರೆತು ಮತ್ತೆ ವೇದಿಕೆಯಲ್ಲಿ ಒಂದಾದ ಪ್ರಸಂಗ ಇಂದು ನಡೆಯಿತು.
ತಾಲೂಕಿನ ಮರಳಿಯ ಹೊರವಲಯದಲ್ಲಿರುವ ಖಾಸಗಿ ಹೊಟೇಲ್‌ನಲ್ಲಿ ನಡೆದ ಬಿಜೆಪಿದ ಬಳ್ಳಾರಿ ವಿಭಾಗದ ನಾಲ್ಕು ಜಿಲ್ಲೆಗಳ ಪ್ರಮುಖ ಪದಾಧಿಕಾರಿಗಳ ಸಂಘಟನಾ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಪಕ್ಷದ ಹಲವು ನಾಯಕರ ಸಮ್ಮುಖದಲ್ಲಿ ರೆಡ್ಡಿ-ರಾಮುಲು ಒಂದಾದರು.ಕಾರ್ಯಕ್ರಮದ ವೇದಿಕೆಯಲ್ಲಿ ರೆಡ್ಡಿ ಮತ್ತು ರಾಮುಲು ಅವರಿಗೆ ಪರಸ್ಪರ ಅಕ್ಕಪಕ್ಕದಲ್ಲೇ ಆಸನದ ವ್ಯವಸ್ಥೆ ಮಾಡಲಾಗಿತ್ತು. ಮೊದಲಿಗೆ ವೇದಿಕೆ ಏರಿದ ರೆಡ್ಡಿ ತಮ್ಮ ಆಸನದಲ್ಲಿ ಕುಳಿತರು. ಬಳಿಕ ವೇದಿಕೆಗೆ ಬಂದ ಶ್ರೀರಾಮುಲು ಅವರು ರೆಡ್ಡಿ ಅವರನ್ನು ದಾಟಿಕೊಂಡು ಹೋಗಿ ವೇದಿಕೆಯಲ್ಲಿದ್ದ ಪಕ್ಷದ ಹಲವು ಮುಖಂಡರನ್ನು ಮಾತನಾಡಿಸಿದರು. ಬಳಿಕ ರೆಡ್ಡಿ ಪಕ್ಕದಲ್ಲಿ ಆಸೀನರಾದರು. ಆಗ ರೆಡ್ಡಿ ಅವರು ರಾಮುಲು ಜೊತೆ ಮಾತನಾಡಿದರು.