ಕಲಬುರಗಿ: ಮಳೆಯಿಂದ ಸೋರುತ್ತಿದ್ದ ಸರ್ಕಾರಿ ಕಚೇರಿಯನ್ನು ಸ್ವತಃ ಇಲಾಖೆಯ ಸಿಬ್ಬಂದಿಯೇ ತಮ್ಮ ಜೇಬಿನಿಂದ ಹಣ ಹಾಕಿ ದುರಸ್ತಿ ಕೈಗೊಂಡಿದ್ದು, ಪ್ರಶಂಸೆಗೆ ಪಾತ್ರವಾಗಿದ್ದಾರೆ. ಕಲಬುರಗಿ ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿರುವ ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಿಬ್ಬಂದಿಯೇ ಹಣ ಸಂಗ್ರಹಿಸಿ ದುರಸ್ತಿ ಮಾಡಿ ಗಮನ ಸೆಳೆದಿದ್ದಾರೆ.
6 ಲಕ್ಷ ರೂ. ಹಣ ಸಂಗ್ರಹಿಸಿ ರಿಪೇರಿ: ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಮಳೆ ಬಂದರೆ ನೀರು ಸೋರಿಕೆಯಾಗಿ ಸಿಬ್ಬಂದಿಯು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ದಾಖಲಾತಿಗಳು ಹಾಗೂ ಕಂಪ್ಯೂಟರ್ಗಳು ಮಳೆ ನೀರಿಗೆ ಸಿಲುಕಿ ಹಾನಿಯಾಗುವ ಆತಂಕ ಎದುರಾಗುತ್ತಿತ್ತು. ಹೀಗಾಗಿ, ಸರ್ಕಾರದ ಯಾವುದೇ ಸಹಾಯವಿಲ್ಲದೆ, ತಮ್ಮದೇ ಸಂಬಳದಿಂದ ತಲಾ 5 -10 ಸಾವಿರದಂತೆ ಸುಮಾರು 6 ಲಕ್ಷ ರೂ. ಹಣ ಸಂಗ್ರಹಿಸಿ ಕಚೇರಿಗೆ ಶೆಡ್ ಹಾಕಿ ದಾಖಲೆಗಳನ್ನು ರಕ್ಷಿಸುವ ಕೆಲಸವನ್ನು ಸಿಬ್ಬಂದಿ ಮಾಡಿದ್ದಾರೆ.
ಇಡೀ ಕಟ್ಟಡಕ್ಕೆ ಟಿನ್ ಶೀಟ್ ಹೊಡೆಸಿ, ಅದರ ಮೇಲೆ ಟಾರ್ಪಲ್ ಶೀಟ್ ಹಾಕಿಸಿದ್ದಾರೆ. ಧೂಳು ಹಿಡಿದು ಮೇಲ್ಪದರ ಬೀಳುತ್ತಿದ್ದ ಗೋಡೆಗಳಿಗೆ ಬಣ್ಣ ಬಳಿಸಿದ್ದಾರೆ. ಛಾವಣಿಯನ್ನು ಪಿಒಪಿ ಮಾಡಿಸಿ ವಿದ್ಯುತ್ ಬಲ್ಫ್, ವೈರಿಂಗ್, ಫ್ಯಾನ್, ಶೌಚಗೃಹ, ವಿಶ್ರಾಂತಿ ಸ್ಥಳ, ಗಾಳಿ ಬೆಳಕು ಬರುತ್ತಿದ್ದ ಸ್ಥಳಕ್ಕೆ ತಡೆಗೋಡೆ ಸೇರಿ ವಿವಿಧ ಕಾಮಗಾರಿಗಳನ್ನು ಕೈಗೊಂಡಿದ್ದಾರೆ.
ಪ್ರಸ್ತಾವನೆ ಸಲ್ಲಿಕೆ: ಈ ಕುರಿತು ಭೂ ದಾಖಲೆಗಳ ಸಹಾಯಕ ನಿರ್ದೇಶಕ ವೀರಣ್ಣ ಗಣಜಲಖೇಡ ಪ್ರತಿಕ್ರಿಯೆ ನೀಡಿದ್ದು, “ಸುಮಾರು ವರ್ಷ ಹಳೆಯದಾದ ಕಟ್ಟಡ ಇದು. ಮಳೆ ನೀರು ಸೋರಿಕೆಯಿಂದ ದಾಖಲಾತಿಗಳು ಹಾಳಾಗಬಾರದು ಅಂತ ಸಿಬ್ಬಂದಿ ಎಲ್ಲರೂ ಸ್ವಮನಸ್ಸಿನಿಂದ ಸೇರಿಕೊಂಡು ಶೆಡ್ ಹಾಕಲಾಗಿದೆ. ಅಲ್ಲದೆ, ಈಗಾಗಲೇ ಕಟ್ಟಡ ಸೋರಿಕೆ ವಿಚಾರ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಅವರ ಸೂಚನೆಯಂತೆ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದೆ” ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಪ್ರವೀಣ್ ಜಾಧವ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ”ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಲ್ಲಿಯೇ ಕಾಲಹರಣ ಮಾಡುತಿದೆ. ಸರ್ಕಾರಿ ಕಚೇರಿಗಳಿಗೆ ಕನಿಷ್ಠ ಮೂಲಭೂತ ಸೌಲಭ್ಯ ಒದಗಿಸಲಾಗದ ಸ್ಥಿತಿಗೆ ಬಂದು ತಲುಪಿದೆ. ನೌಕರರೇ ತಮ್ಮ ಸಂಬಳದಿಂದ ಕಚೇರಿ ಉಳಿಸುತ್ತಿರುವುದು ಸರ್ಕಾರಕ್ಕೆ ನಾಚಿಕೆ ತರುವಂತಹದು” ಎಂದು ಪ್ರವೀಣ್ ಜಾಧವ್ ಟೀಕಿಸಿದ್ದಾರೆ.
ಸರ್ಕಾರಿ ನೌಕರರ ನಿಷ್ಠೆ, ಜವಾಬ್ದಾರಿ ಮತ್ತು ಬದ್ಧತೆ ಇಡೀ ವ್ಯವಸ್ಥೆಗೆ ಮಾದರಿಯಾಗಿದೆ. ಕಚೇರಿ ಸಿಬ್ಬಂದಿಯ ಈ ಸಾರ್ಥಕ ಮತ್ತು ಸ್ವಯಂಪ್ರೇರಿತ ಕ್ರಮವು ಇತರ ಇಲಾಖೆಗಳಿಗೆ ಪ್ರೇರಣೆಯಾಗಿದೆ. ಆದಷ್ಟು ಬೇಗ ಸರ್ಕಾರ ಕೂಡ ಇಂತಹ ಪರಿಸ್ಥಿತಿಗಳ ಪರಿಶೀಲನೆ ನಡೆಸಿ, ತಕ್ಷಣವೇ ಅಗತ್ಯ ಸೌಕರ್ಯ ಒದಗಿಸುವತ್ತ ಗಮನಹರಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.