ಶಿವಮೊಗ್ಗ: ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳ ಜೀವನಾಡಿಯಾದ ಭದ್ರಾ ಜಲಾಶಯ ಭರ್ತಿಯಾಗುವ ಮುನ್ನವೇ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ಶುಕ್ರವಾರ ಭದ್ರಾವತಿ ತಾಲೂಕಿನ ಭದ್ರಾ ಜಲಾಶಯದಿಂದ 1,200 ಕ್ಯೂಸೆಕ್ ನೀರನ್ನು ನದಿಗೆ ನಾಲ್ಕು ಕ್ರಸ್ಟ್ ಗೇಟ್ಗಳ ಮೂಲಕ ಸುಮಾರು ಮೂರು ಅಡಿಯಷ್ಟು ನೀರು ಬಿಡುಗಡೆ ಮಾಡಲಾಗಿದೆ.
ಜಲಾಶಯವು 186 ಅಡಿ ಗರಿಷ್ಟ ಎತ್ತರ ಹೊಂದಿದೆ. ಇಂದಿನ ನೀರಿನ ಮಟ್ಟ 174.4 ಅಡಿ ಇದೆ. ಮಳೆಗಾಲ ಇನ್ನೂ ಇದೆ. ಕಳೆದ ವರ್ಷ ಆ.1ರಂದು ನೀರು ಬಿಡುಗಡೆ ಮಾಡಲಾಗಿತ್ತು. ಈ ಸಲ ಜು. 11ಕ್ಕೆ ನೀರು ಬಿಡುಗಡೆ ಮಾಡಲಾಗಿದ್ದು, ಭರ್ತಿ ಮುನ್ನ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ಒಳ ಹರಿವು ಹೆಚ್ಚಳವಾಗಿದ್ದು, ವಿದ್ಯುತ್ ಉತ್ಪಾದನೆಗಾಗಿ ನೀರು ಬಿಡುಗಡೆ ಮಾಡಲಾಗುತ್ತಿದೆ. ಜಲಾಶಯದ ಎಡದಂಡೆ ಕಾಲುವೆ ದುರಸ್ತಿ ಹಾಗೂ ಬಲದಂಡೆ ಕಾಲುವೆಯ ಗೇಟ್ ದುರಸ್ತಿ ಹಿನ್ನೆಲೆ ನೀರು ಬಿಡುಗಡೆ ಮಾಡದ ಕಾರಣ ನೇರವಾಗಿ ನದಿಗೆ ನೀರು ಬಿಡುಗಡೆ ಮಾಡಲಾಗಿದೆ.