ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆಗೆ ಸವಾಲಾಗಿದ್ದ, 16ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿದ್ದ ರೌಡಿಶೀಟರ್ ಪ್ರವೀಣ ಮನೋಹರ ಸುಧೀರ್ (37)ನನ್ನು ಸೋಮವಾರ ಯಲ್ಲಾಪುರ ತಾಲೂಕಿನ ಕಣ್ಣೀಗೇರಿ ಬಳಿಯ ದಟ್ಟ ಅರಣ್ಯದಲ್ಲಿ ಕಾಲಿಗೆ ಗುಂಡು ಹಾರಿಸಿ ಸಿನಿಮೀಯ ರೀತಿಯಲ್ಲಿ ಬಂಧಿಸಲಾಗಿದೆ. ಈ ಕಾರ್ಯಾಚರಣೆ ವೇಳೆ, ಪ್ರವೀಣ್ ನಡೆಸಿದ ಮಾರಣಾಂತಿಕ ಹಲ್ಲೆಯಿಂದ ನಾಲ್ವರು ಪೊಲೀಸರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ಮೂರು ತಿಂಗಳಿಂದ ಪೊಲೀಸರ ಕಣ್ತಪ್ಪಿಸಿ ತಲೆಮರೆಸಿಕೊಂಡಿದ್ದ ಜೊಯಿಡಾ ತಾಲೂಕಿನ ರಾಮನಗರ ನಿವಾಸಿ ಪ್ರವೀಣ್, ಸಾರ್ವಜನಿಕರಿಗೆ ಮತ್ತು ಪೊಲೀಸರಿಗೆ ಸಿಂಹಸ್ವಪ್ನವಾಗಿದ್ದ. ಈತನ ವಿರುದ್ಧ ಗುಂಡಾ ಕಾಯ್ದೆ, ದರೋಡೆ, ದೌರ್ಜನ್ಯ, ಪೊಲೀಸರ ಮೇಲಿನ ಹಲ್ಲೆ ಸೇರಿದಂತೆ ಒಟ್ಟು 16 ಗಂಭೀರ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 9 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ.
ಎಸ್ಪಿ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಮಾಹಿತಿ: ಸಾಕ್ಷಿಗಳನ್ನು ಬೆದರಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುತ್ತಿದ್ದ ಪ್ರವೀಣನ ಅಪರಾಧ ಚಟುವಟಿಕೆಗಳಿಗೆ ಆತನ ಸಹೋದರ, 14 ವರ್ಷದ ಮಗ ಮತ್ತು ಪತ್ನಿ ಕೂಡ ಸಂಪೂರ್ಣವಾಗಿ ನೆರವು ನೀಡುತ್ತಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಮ್. ನಾರಾಯಣ ಯಲ್ಲಾಪುರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ವಿವರಿಸಿದರು.
ಈತ ಈ ಹಿಂದೆ ಖಾನಾಪುರದಲ್ಲಿ ಪೊಲೀಸರಿಂದ ತಪ್ಪಿಸಿಕೊಂಡು ಹೋಗಿದ್ದ. ಕಾರಣ ಪ್ರವೀಣ್ ಇರುವಿಕೆಯ ಖಚಿತ ಮಾಹಿತಿ ಪಡೆದ ಪೊಲೀಸರು, ಸೋಮವಾರ ಸಂಜೆ 6:50ರ ಸುಮಾರಿಗೆ ಕಣ್ಣೀಗೇರಿ ಬಳಿಯ ದಟ್ಟಾರಣ್ಯದಲ್ಲಿ ಪ್ರವೀಣನನ್ನು ಸುತ್ತುವರೆದಿದ್ದಾರೆ. ಪೊಲೀಸರು ಎಚ್ಚರಿಕೆ ನೀಡಿದರೂ, ಆತ ಶರಣಾಗಲು ನಿರಾಕರಿಸಿದ. ಬದಲಿಗೆ, ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದಾಗಲೂ ಹೆದರದೇ, ಕಲ್ಲು ಮತ್ತು ಚೂರಿಯಿಂದ ತಿರುಗಿಬಿದ್ದು ಪೊಲೀಸರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಈ ವೇಳೆ, ರಾಮನಗರ ಪಿ.ಎಸ್.ಐ ಮಹಾಂತೇಶ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಘಟನೆಯಲ್ಲಿ ಪಿಎಸ್ಐ ಮಹಾಂತೇಶ್, ಪಿಸಿ ಮಲ್ಲಿಕಾರ್ಜುನ ಹೊಸಮನಿ, ಜೊಯಿಡಾ ಪೊಲೀಸ್ ಠಾಣೆಯ ಜಾಫರ್ ಅಟರಗುಂಜಿ ಮತ್ತು ಅಸ್ಲಾಂ ಘಟ್ಟದ ಗಂಭೀರವಾಗಿ ಗಾಯಗೊಂಡರು. ಗಾಯಗೊಂಡವರನ್ನು ತಕ್ಷಣ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಪೊಲೀಸರ ಮೇಲಿನ ಹಲ್ಲೆ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರವೀಣ್ ವಿರುದ್ಧ ಹೊಸ ಪ್ರಕರಣವನ್ನು ದಾಖಲಿಸಲಾಗಿದೆ. “ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತರ ಜಿಲ್ಲಾ ಆರೋಪಿತನನ್ನು ವಾರಂಟಿನ ಮೇಲೆ ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿ, ಸ್ವ-ರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಬೇಕಾಯಿತು” ಎಂದು ಎಸ್.ಪಿ. ನಾರಾಯಣ ತಿಳಿಸಿದರು. ಬಂಧಿತ ಪ್ರವೀಣನನ್ನು ಸಹ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಯಶಸ್ವಿ ಕಾರ್ಯಾಚರಣೆಗೆ ಹೆಚ್ಚುವರಿ ಎಸ್ಪಿಗಳಾದ ಕೃಷ್ಣಮೂರ್ತಿ ಜಿ ಹೆಚ್ಚುವರಿ ಹಾಗೂ ಎಂ. ಜಗದೀಶ, ದಾಂಡೇಲಿ ಉಪ-ವಿಭಾಗದ ಡಿವೈಎಸ್‌ಪಿ ಶಿವಾನಂದ ಮದರಖಂಡಿ, ಶಿರಸಿ ಡಿಎಸ್ಪಿ ಗೀತಾ ಪಾಟೀಲ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಎಸ್.ಪಿ. ಶ್ಲಾಘಿಸಿದ್ದಾರೆ.