ಜ್ಞಾನದ ಬೆಳಕನ್ನು ನೀಡುವವನೆ ಗುರು: ಅಥಣಿ ಪ್ರಭು ಚನ್ನಬಸವ ಮಹಾಸ್ವಾಮಿ
ಜೀವನದ ಪ್ರತಿ ಹೆಜ್ಜೆ ಹೆಜ್ಜೆಗೂ ನಮ್ಮನ್ನು ತೀಡುತ್ತ, ಮನದ ಅಂಧಕಾರವನ್ನು ತೊಲಗಿಸಿ ಜ್ಞಾನದ ಬೆಳಕನ್ನು ನೀಡುವವನೆ ನಿಜವಾದ ಗುರು ಎಂದು ಧಾರವಾಡ ಮುರುಘಾ ಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು. ಅವರು ಗುರುವಾರ ಇಲ್ಲಿನ ಶಿವಬಸವ ನಗರದ ಪ್ರಭುದೇವ ಸಭಾಗ್ರಹದಲ್ಲಿ ನಾಗನೂರು ರುದ್ರಾಕ್ಷಿ ಮಠ ಹಾಗೂ ಪ್ರಭುದೇವ ಪ್ರತಿಷ್ಠಾನ ಮಾತೃ ಮಂಡಳಿಯ ಸಹಯೋಗದಲ್ಲಿ ಗುರುಪೂರ್ಣಿಮೆಯ ನಿಮಿತ್ತ ಜರುಗಿದ ಗುರುವಂದನೆ ಕಾರ್ಯಕ್ರಮದಲ್ಲಿ ನಾಗನೂರು ರುದ್ರಾಕ್ಷಿ ಮಠದ ವತಿಯಿಂದ ಗುರುವಂದನೆ ಸ್ವೀಕರಿಸಿ ಮಾತನಾಡಿದರು .
ಮುಂದುವರೆದು ಮಾತನಾಡಿದ ಶ್ರೀಗಳು ಜಗತ್ತನ್ನೇ ಗೆದ್ದ ಅಲೆಕ್ಸಾಂಡರ್ ತನಗೆ ಚಕ್ರವರ್ತಿ ಎಂಬ ಬಿರುದು, ಸಿಂಹಾಸನ ಎಲ್ಲವೂ ತಂದೆಯಿಂದಲೆ ದೊರೆತಿದ್ದರೂ ಆತ ತಂದೆಗಿಂತ ಹೆಚ್ಚು ತನ್ನ ಗುರುವಾದ ಅರಿಸ್ಟಾಟಲ್ ಗೆ ಶಿರಬಾಗಿದ. ಹಾಗೆಯೇ ಸ್ವಾಮಿ ವಿವೇಕಾನಂದರು ಭಾರತದ ಆಧ್ಯಾತ್ಮಿಕತೆಯ ಶ್ರೇಷ್ಠತೆಯನ್ನು ಜಗತ್ತಿಗೆ ಪರಿಚಯಿಸಿ ವಿಶ್ವವಿಖ್ಯಾತಿ ಗಳಿಸಿದರೂ ತನ್ನ ಸಾಧನೆಗೆ ಗುರು ರಾಮಕೃಷ್ಣ ಪರಮಹಂಸರೆ ಕಾರಣವೆಂದರು. ಹೀಗೆ ಸಮಾಜದಲ್ಲಿ ಗುರುವಿನ ಪಾತ್ರ ಹಿರಿದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಧಾರವಾಡದ ಹಿರಿಯ ಸಾಹಿತಿ ಡಾ. ಸಂಗಮನಾಥ ಲೋಕಾಪುರ ಅಂದು ಧಾರವಾಡದ ಮುರುಘಾ ಮಠದಲ್ಲಿ ಮೃತ್ಯುಂಜಯ ಸ್ವಾಮಿಗಳು ಉಚಿತ ವಿದ್ಯಾರ್ಥಿ ಪ್ರಸಾದ ನಿಲಯ ಪ್ರಾರಂಭಿಸದೆ ಇದ್ದಿದ್ದರೆ ನಗರದಲ್ಲಿ ಇಂದು ಕಲೆ, ಸಂಗೀತ, ಸಾಹಿತ್ಯ, ಚಳುವಳಿ, ಹೋರಾಟ ಹುಟ್ಟುತ್ತಲೆ ಇರಲಿಲ್ಲ. ಇವೆಲ್ಲವುಗಳಿಗೆ ಪ್ರೇರಣೆಯನ್ನು ನೀಡಿ ಸಮಾಜವನ್ನು ಮುನ್ನಡೆಸಿದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳವರಿಗೆ ಗುರುವಂದನೆ ಸಲ್ಲಿಸುತ್ತಿರುವ ನಾಗನೂರು ರುದ್ರಾಕ್ಷಿ ಮಠದ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಥಣಿ ಮೋಟಗಿ ಮಠದ ಪ್ರಭು ಚನ್ನಬಸವ ಮಹಾಸ್ವಾಮಿಗಳು, ಗುರು ಅರಿವಿನ ಆತ್ಮಜ್ಯೋತಿ, ಪ್ರೇಮದ ಪರಮ ಮೂರ್ತಿ ಇದ್ದಂತೆ. ನಮಗೆಲ್ಲ ಅರಿವು, ಒಲವು, ಬಾಳು, ಬದುಕನ್ನು ನೀಡಿ ನಮ್ಮ ನೋವು ನಲಿವುಗಳಲ್ಲಿ,
ಸೋಲು ಗೆಲುವುಗಳಲ್ಲಿ ಭಾಗಿಯಾಗುವ ಗುರು ಸದಾ ಪೂಜನೀಯ ಎಂದರು.
ಗುರುವಂದನಾ ಕಾರ್ಯಕ್ರಮದ ನೇತೃತ್ವವನ್ನು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ವಹಿಸಿದ್ದರು ಸಮ್ಮುಖವನ್ನು ಮಲ್ಲನಕೆರೆ ವಿರಕ್ತ ಮಠದ ಚನ್ನಬಸವ ಮಹಾಸ್ವಾಮಿಗಳು ವಹಿಸಿದ್ದರು. ಇದೇ ಸಂದರ್ಭದಲ್ಲಿ ಕರ್ನಾಟಕ ಜರ್ಮನ್ ತರಬೇತಿ ಕೇಂದ್ರದ ಮೂಲಕ ನಾಡಿನ ಬಡ ಮಕ್ಕಳಿಗೆ ಕೈಗಾರಿಕಾ ತರಬೇತಿ ನೀಡುತ್ತಿರುವ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಚಾರ್ಯ ಚಿದಾನಂದ ಬಾಕಿ ಇವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಿದ್ಧರಾಮೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಪ್ರದರ್ಶಿಸಿದ ವಚನ ನೃತ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಪ್ರಾರಂಭದಲ್ಲಿ ಪ್ರಭುದೇವ ಪ್ರತಿಷ್ಠಾನ ಮಾತೃಮಂಡಳಿ ಹಾಗೂ ಉಚಿತ ವಿದ್ಯಾರ್ಥಿ ಪ್ರಸಾದ ನಿಲಯದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಚಂದ್ರಗಿರಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎ.ಎಲ್. ಪಾಟೀಲ ಸ್ವಾಗತಿಸಿದರು. ವಿಜ್ಞಾನ ಕೇಂದ್ರದ ರಾಜಶೇಖರ ಪಾಟೀಲ ನಿರೂಪಿಸಿದರು. ಪ್ರಾಧ್ಯಾಪಕ ಮಂಜುನಾಥ ಶರಣಪ್ಪನವರ ವಂದಿಸಿದರು.
Laxmi News 24×7