ಬಂಟ್ವಾಳ(ದಕ್ಷಿಣ ಕನ್ನಡ): ಈ ವರ್ಷ ಇದ್ದಕ್ಕಿದ್ದಂತೆ ಕೇರಳದ ಪುಣ್ಯಕ್ಷೇತ್ರವೊಂದು ಗಮನ ಸೆಳೆಯುತ್ತಿದೆ. ಸೋಶಿಯಲ್ ಮೀಡಿಯಾದಲ್ಲಂತೂ ಕೇರಳದ ಕಣ್ಣೂರು ಜಿಲ್ಲೆಯಲ್ಲಿರುವ ಕೊಟ್ಟಿಯೂರು ಕ್ರೇಜ್ ಸೃಷ್ಟಿಸಿದೆ.
ಕಣ್ಣೂರು ಜಿಲ್ಲೆಯಲ್ಲಿರುವ ಕೊಟ್ಟಿಯೂರು ಶಿವ ಕ್ಷೇತ್ರದಲ್ಲಿ ವರ್ಷಕ್ಕೊಂದು ಬಾರಿ 27 ದಿನಗಳ ವೈಶಾಖ ಮಹೋತ್ಸವ ನಡೆಯುತ್ತದೆ. ಈ ವರ್ಷ ಕೊಟ್ಟಿಯೂರಿನ ವೈಶಾಖ ಮಹೋತ್ಸವ ಭಾರೀ ಸಂಚಲನ ಮೂಡಿಸಿದೆ.
ದಕ್ಷಯಜ್ಞದ ಪುರಾಣ ಕಥೆಯೊಂದಿಗೆ ಸಂಬಂಧ ಇರುವ ಕೊಟ್ಟಿಯೂರು ಸನ್ನಿಧಿಯಲ್ಲಿ ಸ್ಥಾವರ ರೂಪದ ಶಾಶ್ವತ ದೇವಸ್ಥಾನಗಳಿಲ್ಲ. ವೈಶಾಖ ಮಹೋತ್ಸವಕ್ಕಾಗಿ ಪ್ರಕೃತಿದತ್ತವಾದ ತಾತ್ಕಾಲಿಕ ಚಪ್ಪರ ಮಂದಿರ ನಿರ್ಮಿಸಿ, ಪರಮೇಶ್ವರನ ಉದ್ಭವ ಲಿಂಗ ದರ್ಶನಕ್ಕಾಗಿ ಸಾವಿರಾರು ಭಕ್ತರು ಹೋಗಿ ಬಂದಿದ್ದಾರೆ.
ಜುಲೈ 4ರವರಗೆ ಮಹೋತ್ಸವ ನಡೆಯಲಿದ್ದು, ಪ್ರತೀ ದಿನ ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ, ಬಂಟ್ವಾಳ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದಲೇ ಸಾವಿರಾರು ಭಕ್ತರು ತೆರಳುತ್ತಿದ್ದಾರೆ. ವಾವಲಿ ನದಿ ತಟದಲ್ಲಿರುವ ಕೊಟ್ಟಿಯೂರು ಕ್ಷೇತ್ರ ಸುಮಾರು 30 ಸಾವಿರ ಎಕರೆ ವನ್ಯಧಾಮ ವ್ಯಾಪ್ತಿಯಲ್ಲಿ ಬರುತ್ತದೆ.