ಗಂಗಾವತಿ: “ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಅನ್ನಭಾಗ್ಯ’ ಪಡಿತರ ಫಲಾನುಭವಿಗಳಿಗೆ ತಲುಪದೇ ಬಹುತೇಕ ಧಾನ್ಯ ಕಳ್ಳರ ಪಾಲಾಗುತ್ತಿದ್ದು, ಇದನ್ನು ತಡೆಯಲು ನ್ಯಾಯಬೆಲೆ ಅಂಗಡಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು” ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಡಾ. ವೆಂಕಟೇಶ್ ಬಾಬು ಹೇಳಿದರು.
ತಾಲೂಕು ಪಂಚಾಯಿತಿ ಆವರಣದಲ್ಲಿರುವ ಮಂಥನ ಸಭಾಂಗಣದಲ್ಲಿ ಬುಧವಾರ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಹಂತದ ಪಂಚ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕ್ಯಾಮೆರಾ ಹಾಕದಿದ್ದರೆ ಪರವಾನಗಿ ರದ್ದು: “ರಾಜ್ಯ ಸರ್ಕಾರದ ಬಹುತೇಕ ಅರ್ಧ ಬಜೆಟ್ ಹಣ ಅನ್ನಭಾಗ್ಯಕ್ಕೆ ವ್ಯಯವಾಗುತ್ತಿದೆ. ಆದರೆ, ಫಲಾನುಭವಿಗಳಿಗೆ ಈ ಯೋಜನೆ ಸಂಪೂರ್ಣ ಲಾಭ ಸಿಗದೇ ಕಳ್ಳರ ಪಾಲಾಗುತ್ತಿದೆ. ಬಹುತೇಕ ಧಾನ್ಯ ಕಾಳಸಂತೆಗೆ ಹೋಗುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ತಡೆಯಲು ಕಡ್ಡಾಯವಾಗಿ ತಾಲೂಕಿನ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಸಿಸಿ ಕ್ಯಾಮರಾ ಹಾಕಿಸಲು ಸೂಚಿಸಬೇಕು. ನಿಯಮ ಪಾಲಿಸದ ಅಂಗಡಿಗಳ ಪರವಾನಗಿ ರದ್ದು ಮಾಡಿ” ಎಂದು ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಹಾರ ಇಲಾಖೆಯ ಶಿರಸ್ತೇದಾರ ಸುಹಾಸ್ ಎರಿಸೀಮೆ, ಸಿಸಿ ಕ್ಯಾಮರಾ ಅಳವಡಿಸುವಂತೆ ನೋಟೀಸ್ ಜಾರಿ ಮಾಡುವ ಅಧಿಕಾರಿ ತಮ್ಮ ವ್ಯಾಪ್ತಿಯಲ್ಲಿ ಇಲ್ಲ. ಇದಕ್ಕೆ ಅಂಗಡಿ ಮಾಲಿಕರು ನೂರಾರು ಸಬೂಬು ಹೇಳುತ್ತಾರೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಕ್ರಮ ತಡೆಗೆ ನಿರಂತರ ತಪಾಸಣೆ: “ಅಕ್ರಮ ತಡೆಯಲು ಅಂಗಡಿಗಳಿಗೆ ಆಗಾಗ ದಿಢೀರ್ ಭೇಟಿ ನೀಡುವ ಕೆಲಸ ಮಾಡಲಾಗುತ್ತಿದೆ. ಕಳೆದ ತಿಂಗಳಲ್ಲಿ ಗ್ರಾಮೀಣ ಹಾಗೂ ನಗರದ ಭಾಗದ ನಿರೀಕ್ಷಕರು 26 ಅಂಗಡಿಗಳಿಗೆ ಭೇಟಿ ನೀಡಿದ್ದಾರೆ. ನಾನು ನಗರದಲ್ಲಿನ 5 – 6 ಅಂಗಡಿಗಳಿಗೆ ಭೇಟಿ ನೀಡಿದ್ದೇವೆ ಎಂದರು.