ಹಾಲಿವುಡ್ ಕ್ರೈಂ ಸ್ಟೋರಿ ನೋಡಿ ದರೋಡೆ;ಶಾಲೆ ನಡೆಸುತ್ತಿದ್ದವನ ಕ್ಯಾಸಿನೋ ಚಟಕ್ಕೆ ಬಿಗ್ ರಾಬರಿ;ಪಾರ್ಟ್ ಒಂದೇ ಹೀಗಾದರೆ ಪಾರ್ಟ್ 2 ಅದ್ಹೇಂಗೋ?
ಇದು ಬೇಲಿಗೆ ಎದ್ದು ಹೊಲ ಮೆಯ್ದೆ ಕಥೆಯಾಗಿದೆ. ಬ್ಯಾಂಕ್ ಕಳ್ಳತನ ಪ್ರಕರಣವನ್ನ ವಿಜಯಪುರ ಪೊಲೀಸರು ಭೇದಿಸಿದ್ದಾರೆ. ವಿಶೇಷ ಅಂದ್ರೆ ಈ ಕಳ್ಳತನ ಮಾಡಿದ್ದು ಬೇರಾರು ಅಲ್ಲ ಅದೇ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ ಖದೀಮ. ರಾಜ್ಯದಲ್ಲೇ ಅತ್ಯಂತ ದೊಡ್ಡ ಕಳ್ಳತನ ಪ್ರಕರಣ ಇದಾಗಿದೆ. ಇನ್ನೂ ಎಸ್ ಪಿ ಯವರು ಈ ಕೇಸ್ ನಲ್ಲಿ ಎರಡು ಪಾರ್ಟ್ ಗಳನ್ನಾಗಿ ಮಾಡಿದ್ದು. ಇವತ್ತಿನದು ಮೊದಲನೇಯ ಭಾಗ ಎಂದು ಹೇಳುವ ಮೂಲಕ ಪ್ರಕರಣದಲ್ಲಿ ಟ್ವಿಸ್ಟ್ ನೀಡಿದ್ದಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್..
ವಿಜಯಪುರ ಜಿಲ್ಲಾ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ರಾಜ್ಯದ ಅತೀ ದೊಡ್ಡ ಕಳ್ಳತನ ಪ್ರಕರಣವನ್ನ ವಿಜಯಪುರ ಜಿಲ್ಲಾ ಪೊಲೀಸರು ಭೇದಿಸಿದ್ದಾರೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಣಣದಲ್ಲಿನ ಕೆನೆರಾ ಬ್ಯಾಂಕ್ ನಲ್ಲಿ ಕಳೆದ 2025 ಮೇ 25 ರಂದು ಕಳ್ಳತನ ನಡೆದಿತ್ತು. ಬ್ಯಾಂಕ್ ಲಾಕರ್ ಕೀ ತೆಗೆದು ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಲಾಗಿತ್ತು. ಬರೋಬ್ಬರಿ 58 ಕೆಜಿ 975 ಗ್ರಾಂ ಚಿನ್ನಾಭರಣಗಳು ಹಾಗೂ 5.20 ಲಕ್ಷ ನಗದು ಕದ್ದು ಕಳ್ಳರು ಪರಾರಿಯಾಗಿದ್ದರು.
ಅಂದಾಜು ಮೌಲ್ಯ 53 ಕೋಟಿ 26 ಲಕ್ಷ ರೂಪಾಯಿ ಆಭರಣ ಕಳ್ಳತನ ಮಾಡಿ ಬ್ಯಾಂಕ್ ಆವರಣದ ಸಿಸಿ ಕ್ಯಾಮೆರಾ ಹಾರ್ಡ್ ಡಿಸ್ಕ್ ಸಮೇತ ಪರಾರಿಯಾಗಿದ್ದರು. ವಿಜಯಪುರ ಜಿಲ್ಲೆಯ ಪೊಲೀಸರಿಗೆ ಅತ್ಯಂತ ಚಾಲೆಂಜ್ ಆಗಿದ್ದ ಈ ಪ್ರಕರಣವನ್ನು ಕೊನೆಗೂ ಪೊಲೀಸರು ಭೇದಿಸಿದ್ದಾರೆ. ಮನಗೂಳಿ ಕೆನೆರಾ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿ ಇತ್ತಿಚಿನ ವರ್ಗಾವಣೆಯಾಗಿದ್ದ ವಿಜಯಕುಮಾರ ಮಿರಿಯಾಲ್, ಚಂದ್ರಶೇಖರ್ ನರೆಲ್ಲಾ ಹಾಗೂ ಸುನೀಲ್ ಮೋಕಾ ಎಂಬುವರನ್ನ ಬಂಧಿಸಿದ್ದಾರೆ. ಬಂಧಿತರಿಂದ 10.5 ಕೆಜಿ ಚಿನ್ನಾಭರಣ, ಎರಡು ಕಾರುಗಳ ವಶಕ್ಕೆ ಪಡೆಯಲಾಗಿದೆ.
ಕಳೆದ 2025 ಮೇ 25 ರಂದು ಕಳ್ಳತನ ನಡೆದ ಬಳಿಕ. ಖದೀಮರ ಹುಡುಕಾಟ ನಡೆಸಿದ ಪೊಲೀಸರು 8 ತಂಡಗಳಾಗಿ ರಚನೆ ಮಾಡಿ ದೇಶದ ವಿವಿಧ ಭಾಗಗಳಲ್ಲಿ ಸುತ್ತಾಡಿದ್ದರು. ಕೊನೆಗೆ ಆರೋಪಿಗಳು ಗೋವಾದಲ್ಲಿ ಇರೋದು ಪತ್ತೆಯಾದ ಬಳಿಕ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಮೂವರನ್ನ ಬಂಧಿಸಿದ್ದು, ಉಳಿದವರಿಗಾಗಿ ಶೋಧ ಕಾರ್ಯ ನಡೆದಿದೆ. ಬಂಧಿತ ಬ್ಯಾಂಕ್ ಮ್ಯಾನೇಜರ್ ವಿಜಯಕುಮಾರ್ ತನ್ನ ಸಹೋದರ ಹಾಗೂ ಸ್ನೇಹಿತರ ಮೂಲಕ ನಕಲಿ ಕಿ ತಯಾರಿ ಮಾಡಿ ಬ್ಯಾಂಕ್ ಲಾಕರ್ ತೆಗೆದು ಬಂಗಾರ ಕಳ್ಳತನ ಮಾಡಿದ್ದಾರೆ.
ಇದಕ್ಕಾಗಿ ಒಂದು ತಿಂಗಳ ಕಾಲ ಪ್ಲಾನ್ ಮಾಡಿದ್ದಾನೆ. ಜೊತೆಗೆ ಹಾಲಿವುಡ್ ಚಿತ್ರಗಳಲ್ಲಿ ಬ್ಯಾಂಕ್ ಕಳ್ಳತನ ಮಾಡಿ ಪರಾರಿಯಾಗಿವು ದೃಶ್ಯಗಳನ್ನ ನೋಡಿ ಪರಾರಿಯಾದ್ದಾನೆ. ಬಂಗಾರ ಕದ್ದು ಕಾರ್ ನಲ್ಲಿ ಹಾಕಿ, ಸುತ್ತಾಡಲು ತಂದಿದ್ದ ಬೈಕ್ ಗಳನ್ನ ಟ್ರಕ್ ನಲ್ಲಿ ಹಾಕಿ ಎಸ್ಕೇಪ್ ಆಗಿದ್ದರು. ಜೊತೆಗೆ ಬ್ಯಾಂಕ್ ಸಿಸಿಟಿವಿ ಕಾರ್ಯಾಚರಣೆ, ಸ್ಥಳೀಯರ ಚಲನ ವಲನಗಳನ್ನ ಗಮನಿಸಿದ್ದ ಮ್ಯಾನೇಜರ್ ಯಾರಿಗೂ ಅನುಮಾನ ಬರದಂತೆ ಸಂಜೆ ವೇಳೆಯಲ್ಲಿ ಕಳ್ಳತನ ಮಾಡಿದ್ದ. ತನಿಖೆಯ ದಿಕ್ಕು ತಪ್ಪಿಸಲು ಗೊಂಬೆ ಇಟ್ಟು ಮಾಟ ಮಂತ್ರದ ನಾಟಕ ಮಾಡಿದ್ದ. ಆದ್ರೆ ಪೊಲೀಸರು ತನಿಖೆ ನಡೆಸಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಪಾರ್ಟ್ ಎರಡರಲ್ಲಿ ಇನ್ನಷ್ಟು ಮಾಹಿತಿ ನೀಡುವದಾಗಿಯೂ ಹೇಳಿದ್ದಾರೆ.
ಸದ್ಯ ಮೂವರು ಆರೋಪಿಗಳನ್ನ ಮಾತ್ರ ಬಂಧಿಸಲಾಗಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಅನ್ನ ಕೊಟ್ಟ ಸಂಸ್ಥೆಗೆ ದ್ರೋಹ ಬಗೆದ ಮ್ಯಾನೇಜರ್ ಅಂದರ್ ಆಗಿದ್ದಾನೆ. ಇನ್ನೂ ಪಾರ್ಟ್ ೨ ರಲ್ಲಿ ಅದ್ಯಾವ ಖದೀಮರು ಇದ್ದಾರೋ ಎಂದು ಕಾದು ನೋಡಬೇಕಿದೆ.