ಬೆಳಗಾವಿ: ಇಲ್ಲಿನ ಬಳ್ಳಾರಿ ನಾಲೆ ಉಕ್ಕಿ ಹರಿಯುತ್ತಿದ್ದು, ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳನ್ನು ಆಹುತಿ ಪಡೆದುಕೊಳ್ಳುತ್ತಿದೆ. ಹಾಗಾಗಿ, ಗೆಣಸು ಕಟಾವು ಮಾಡಲು ರೈತರು ಹರಸಾಹಸಪಡುತ್ತಿದ್ದಾರೆ. ಇದನ್ನು ಹಾಗೇ ಬಿಟ್ಟರೆ ಹಾಕಿದ ಬಂಡವಾಳ ಕೂಡ ಕೈ ಸೇರುವುದಿಲ್ಲ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ನಗರದ ಹೊರ ವಲಯದಲ್ಲಿ ಹರಿಯುವ ಬಳ್ಳಾರಿ ನಾಲೆ ಇಲ್ಲಿನ ರೈತರಿಗೆ ಶಾಪವಾಗಿ ಪರಿಣಮಿಸಿದೆ. ಆರಂಭದಲ್ಲಿ ಈ ಭಾಗದ ರೈತರಿಗೆ ವರದಾನವಾಗಿತ್ತು. ಕಳೆದ ಹತ್ತು ವರ್ಷಗಳಿಂದ ಹೂಳು ತುಂಬಿಕೊಂಡು ಪ್ರತೀ ವರ್ಷ ಮಳೆಗಾಲದಲ್ಲಿ ಅವಾಂತರವನ್ನೇ ಸೃಷ್ಟಿಸುತ್ತಿದೆ.
ಸಾವಿರಾರು ಎಕರೆ ಪ್ರದೇಶ ಸದ್ಯ ಜಲಾವೃತವಾಗಿದೆ. ಈಗಾಗಲೇ ಬೆಳೆದಿರುವ ಗೆಣಸು, ಭತ್ತ, ತರಕಾರಿ ಸೇರಿ ವಿವಿಧ ಬೆಳೆಗಳು ಹಾಳಾಗುವ ಭೀತಿ ಎದುರಾಗಿದೆ. ಒಂದೆಡೆ ನಿರಂತರವಾಗಿ ಮಳೆ ಆಗುತ್ತಿದ್ದರೆ, ಮತ್ತೊಂದೆಡೆ ನಿಂತ ನೀರಿನಲ್ಲೇ ಗೆಣಸು ಕಟಾವ್ ಮಾಡಲು ರೈತರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಶಾಹಪುರ ಭಾಗದಲ್ಲಿ ನೂರಾರು ಎಕರೆಯಲ್ಲಿ ಬೆಳೆದಿರುವ ಗೆಣಸು ಈಗ ಕಟಾವಿಗೆ ಬಂದಿದೆ. ರೈತರು ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೇ ಕೊಯ್ಲಿನಲ್ಲಿ ತೊಡಗಿದ್ದಾರೆ.
Laxmi News 24×7