ದಾವಣಗೆರೆ: ಜಿಲ್ಲೆಯಲ್ಲಿ ನೂರಾರು ಬಾಲವಾಡಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಮಕ್ಕಳ ಅಪೌಷ್ಟಿಕತೆ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ 403 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಇಲ್ಲದಂತೆ ಆಗಿದೆ. ಪುಟ್ಟ ಮಕ್ಕಳಿಗೆ ಆಟ, ಪಾಠ ಎಲ್ಲವೂ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿದೆ.
ಎರಡು ತಿಂಗಳಿಗೊಮ್ಮೆ ಬಾಡಿಗೆ ಹಣ ಅಂಗನವಾಡಿ ಕಾರ್ಯಕರ್ತೆಯರ ಕೈ ಸೇರುತ್ತಿದೆ. ಈ 403 ಬಾಲವಾಡಿಗಳು ಮೂಲ ಸೌಲಭ್ಯಗಳ ಕೊರತೆ ಎದುರಿಸುತ್ತಿವೆ. 202 ಅಂಗನವಾಡಿ ಕೇಂದ್ರಗಳನ್ನು ಇತರ ಸರ್ಕಾರಿ ಕಟ್ಟಡಗಳಿಗೆ ಸ್ಥಳಾಂತರಿಸಲಾಗಿದೆ. ಮಕ್ಕಳ ಶಿಕ್ಷಣದ ಕಲಿಕಾ ಆರಂಭಕ್ಕೆ ಭದ್ರ ಬುನಾದಿ ಹಾಕುವ ನಿಟ್ಟಿನಲ್ಲಿ ಮಕ್ಕಳಿಗೆ ಅಂಗನವಾಡಿಗಳು ಅತ್ಯವಶ್ಯಕವಾಗಿವೆ.
ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 1,771 ಅಂಗನವಾಡಿ: ಜಿಲ್ಲೆಯಲ್ಲಿ 6 ತಾಲೂಕುಗಳ ಪೈಕಿ 1,771 ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಮಂಜೂರಾದ ಒಟ್ಟು 1,771 ಅಂಗನವಾಡಿ ಕೇಂದ್ರಗಳ ಪೈಕಿ 1,168 ಕೇಂದ್ರಗಳು ಸ್ವಂತ ಕಟ್ಟಡದಲ್ಲಿವೆ. 202 ಅಂಗನವಾಡಿ ಕೇಂದ್ರಗಳನ್ನು ಇತರ ಸರ್ಕಾರಿ ಕಟ್ಟಡಗಳಿಗೆ( ಶಾಲೆ, ಪಂಚಾಯಿತಿ, ಸಮುದಾಯಭವನ)ಕ್ಕೆ ಸ್ಥಳಾಂತರಿಸಲಾಗಿದೆ. ವಿವಿಧ ತಾಲೂಕುಗಳಲ್ಲಿ 79 ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದ್ದು, ವಿವಿಧ ಹಂತಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಇವೆಲ್ಲವು ಸೇರಿದಂತೆ ಒಟ್ಟಾರೆ 1449 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳನ್ನು ಕಲ್ಪಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಿಳಿಸಿದೆ.
ಸ್ವಂತ ಕಟ್ಟಡ ನಿರ್ಮಿಸಲು ಜಿಲ್ಲಾಡಳಿತ 243 ನಿವೇಶನ ಹಸ್ತಾಂತರ: ಇಲಾಖೆ ಈಗಾಗಲೇ ಒಟ್ಟು 32 ಸ್ವಂತ ಕಟ್ಟಡವಿಲ್ಲದ ಕೇಂದ್ರಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು 243 ನಿವೇಶನಗಳನ್ನು ಹಸ್ತಾಂತರಿಸಿದೆ. 64 ನಿವೇಶನಗಳನ್ನು ಶಾಲಾ ಆವರಣದಲ್ಲಿ ಗುರುತಿಸಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ನಿರ್ಮಾಣ ಮಾಡಲು ಅನುಮತಿ ಕೂಡ ಪಡೆಯಲಾಗಿದೆ. ಉಳಿದಂತೆ ಹೊನ್ನಾಳಿ ಪಟ್ಟಣದಲ್ಲಿ 03 ಹಾಗೂ ಹರಿಹರ ನಗರ ಪ್ರದೇಶದಲ್ಲಿ 12 ಕೇಂದ್ರಗಳಿಗೆ ಕಟ್ಟಡ ನಿರ್ಮಿಸಲು ಸ್ಥಳಾವಕಾಶ ಗುರುತಿಸಿ ಹಸ್ತಾಂತರಿಸಲು ಅಧಿಕಾರಿಗಳು ಕ್ರಮ ವಹಿಸಿದ್ದಾರೆ. ಉಳಿದ ಕೇಂದ್ರಗಳಿಗೆ ಸ್ವಂತ ಕಟ್ಟಡ ನೀಡಲು ಕ್ರಮ ವಹಿಸಲಾಗುತ್ತಿದೆ.