ಬೆಂಗಳೂರು,ಡಿ.17 -ಆರ್ಥಿಕ ಸಂಕಷ್ಟದ ಮಧ್ಯೆ 2021-22ನೇ ಸಾಲಿನ ಬಜೆಟ್ ಮಂಡಿಸುವ ಅನಿವಾರ್ಯತೆ ಇದೆ. ಸೊರಗಿದ ಸಂಪನ್ಮೂಲ ಕ್ರೋಢೀಕರಣದಿಂದ ಮುಂಬರುವ ಬಜೆಟ್ ಗಾತ್ರವೂ ಕುಗ್ಗಲಿದೆ ಎಂಬ ಮಾತು ಕೇಳಿ ಬರುತ್ತಿವೆ. ರಾಜ್ಯ ಹಿಂದೆಂದೂ ಕಾಣದ ಆರ್ಥಿಕ ಸಂಕಷ್ಟವನ್ನು ಈ ಬಾರಿ ಎದುರಿಸುತ್ತಿದೆ. ಲಾಕ್‍ಡೌನ್‍ನಿಂದ ಆರ್ಥಿಕತೆ ಬುಡಮೇಲಾಗಿದೆ. ಬೊಕ್ಕಸ ತುಂಬಿಸುವ ಆದಾಯ ಮೂಲಗಳೆಲ್ಲವೂ ಸೊರಗಿ ಹೋಗಿದ್ದು, ತೆರಿಗೆ ಸಂಗ್ರಹದಲ್ಲೂ ನಿರೀಕ್ಷಿತ ಚೇತರಿಕೆ ಕಾಣುತ್ತಿಲ್ಲ.
ವ್ಯಾಪಾರ-ವಹಿವಾಟು ಕ್ಷೀಣಿಸಿರುವುದರಿಂದ ಸಂಪನ್ಮೂಲ ಸಂಗ್ರಹಕ್ಕೆ ಭಾರೀ ಹೊಡೆತ ಬಿದ್ದಿದೆ. ಇತ್ತ ಜಿಎಸ್ಟಿ ಪರಿಹಾರ ಕುಂಠಿತವಾಗಿದ್ದರೆ ಇನ್ನೊಂದೆಡೆ ಕೇಂದ್ರದ ತೆರಿಗೆ ಪಾಲಿಗೂ ಖೋತಾ ಕಂಡಿದೆ. ಸಾಲ ಎತ್ತುವಳಿಯನ್ನೂ ಅಳೆದು ತೂಗಿ ಮಾಡಬೇಕಾಗಿದೆ. ಒಂದು ವೇಳೆ ಹೆಚ್ಚಿನ ಸಾಲದ ಮೊರೆ ಹೋದರೆ ಅದರ ಭಾರ ರಾಜ್ಯದ ಬೊಕ್ಕಸದ ಮೇಲೆ ಬೀಳಲಿದೆ. ಹೀಗಾಗಿ ಸರ್ಕಾರ ಹೊಸ ಬಜೆಟ್‍ಗಾಗಿ ಹಣ ಹೊಂದಿಸುವ ಸಂಕಷ್ಟ ಎದುರಿಸುತ್ತಿದೆ. ಈ ಎಲ್ಲಾ ಬಿಕ್ಕಟ್ಟಿನ ನಡುವೆ 2021-22ನೇ ಸಾಲಿನ ಹೊಸ ಬಜೆಟ್ ಮಂಡಿಸಬೇಕಾಗಿದೆ.
2021-22ನೇ ಸಾಲಿನ ಹೊಸ ಬಜೆಟ್‍ಗೆ ಈಗಾಗಲೇ ಅಧಿಕಾರಿಗಳು ಪ್ರಾಥಮಿಕ ಸಿದ್ಧತೆಗೆ ಮುಂದಾಗಿದ್ದಾರೆ. ಪ್ರತಿ ಇಲಾಖೆಗೆ ಬೇಕಾಗುವ ಅಂದಾಜು ವೆಚ್ಚದ ಲೆಕ್ಕಾಚಾರ ಒದಗಿಸುವಂತೆ ಸೂಚಿಸಲಾಗಿದೆ. ದುಂದು ವೆಚ್ಚಕ್ಕೆ ಕಡಿವಾಣ ಹಾಕಿ, ನಿಖರ ಹಾಗೂ ವಾಸ್ತವ ವೆಚ್ಚದ ಅಂದಾಜು ನೀಡುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಆರ್ಥಿಕ ಸಂಕಷ್ಟದ ಮಧ್ಯೆ ಆಯವ್ಯಯಕ್ಕಾಗಿ ಹಣ ಹೊಂದಿಸುವುದು ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸದ್ಯದ ರೀತಿಯಲ್ಲೇ ಆರ್ಥಿಕ ಚೇತರಿಕೆ ಕಾಣುತ್ತಿದ್ದರೆ ಸಂಪನ್ಮೂಲ ಕ್ರೋಢೀಕರಣ ಕಷ್ಟ ಸಾಧ್ಯ ಎಂಬುದು ಆರ್ಥಿಕ ಇಲಾಖೆ ಅಧಿಕಾರಿಗಳ ಆತಂಕ. ಆದರೆ ನಿಧಾನವಾಗಿ ಚೇತರಿಕೆ ಕಾಣುತ್ತಿದ್ದು, ಮುಂದಿನ ದಿನಗಳಲ್ಲಿ ಆರ್ಥಿಕ ಚಟುವಟಿಕೆ ಈ ಹಿಂದಿನ ಸ್ಥಿತಿಗೆ ಬರಲಿದೆ ಎಂಬ ಆಶಾಭಾವನೆ ಅಧಿಕಾರಿಗಳದ್ದಾಗಿದೆ.