ನವದೆಹಲಿ/ಹುಬ್ಬಳ್ಳಿ: “ದೇಶದಲ್ಲಿ ಆಹಾರ ಮತ್ತು ಅಗತ್ಯ ವಸ್ತುಗಳ ಕೊರತೆ ಉಂಟಾಗಿದೆ ಎಂಬುದು ಶುದ್ಧ ಸುಳ್ಳು. ಯಾರೊಬ್ಬರೂ ಈ ಹುಸಿ ವದಂತಿಗೆ ಕಿವಿಗೊಡಬಾರದು” ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಮನವಿ ಮಾಡಿದ್ದಾರೆ.
ನವದೆಹಲಿಯಲ್ಲಿ ಮಾಹಿತಿ ನೀಡಿರುವ ಅವರು, “ದೇಶದ ವಿವಿಧೆಡೆ ಆಹಾರ ಪದಾರ್ಥ ಮತ್ತು ಅಗತ್ಯ ವಸ್ತುಗಳ ಕೊರತೆಯಿದೆ ಎಂದು ಕೆಲವರು ಸುಳ್ಳು ವದಂತಿ ಹರಡುತ್ತಿರುವುದು ಗಮನಕ್ಕೆ ಬಂದಿದೆ. ಪ್ರಸ್ತುತ ಸನ್ನಿವೇಶದಲ್ಲಿ ಜನರನ್ನು ದಿಕ್ಕು ತಪ್ಪಿಸುವ ಕಿಡಿಗೇಡಿಗಳ ಪ್ರಯತ್ನವಿದು” ಎಂದು ಸ್ಪಷ್ಟಪಡಿಸಿದರು.
“ಪಂಜಾಬ್‌ನಲ್ಲಿ ಇಂಥ ಸುಳ್ಳು ವದಂತಿ ಹಬ್ಬಿಸಲಾಗಿದೆ. ಆದರೆ, ದೇಶದ ಯಾವುದೇ ಸ್ಥಳದಲ್ಲೂ ಆಹಾರ ಪದಾರ್ಥ ಮತ್ತು ಅಗತ್ಯ ವಸ್ತುಗಳ ಕೊರತೆಯಿಲ್ಲ. ಅಗತ್ಯಕ್ಕಿಂತ ಹೆಚ್ಚೇ ದಾಸ್ತಾನಿದೆ. ಜನರು ಅಗತ್ಯ ಆಹಾರ ಧಾನ್ಯ ಮತ್ತು ದೈನಂದಿನ ಅಗತ್ಯ ವಸ್ತುಗಳಿಗೆ ಎಲ್ಲೂ ಮುಗಿಬೀಳಬೇಕಿಲ್ಲ” ಎಂದು ಹೇಳಿದರು.
“ದೇಶಾದ್ಯಂತ ಆಹಾರ ಪದಾರ್ಥ ಮತ್ತು ಅಗತ್ಯ ವಸ್ತುಗಳ ಸಂಗ್ರಹಣೆ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲನೆ ನಡೆಸಿದೆ. ಎಲ್ಲೆಡೆಯೂ ಅಗತ್ಯಕ್ಕಿಂತ ದೊಡ್ಡ ಮಟ್ಟದಲ್ಲೇ ಆಹಾರ ಧಾನ್ಯ ಮತ್ತು ಅಗತ್ಯ ಸಾಮಗ್ರಿ ಸರಂಜಾಮು ಇರುವುದು ದೃಢಪಟ್ಟಿದೆ. ದೇಶದಲ್ಲಿ ಸಾಕಷ್ಟು ಸಂಗ್ರಹವಿದೆ. ಯಾರೊಬ್ಬರೂ ಆತಂಕಪಡುವ ಅಗತ್ಯವಿಲ್ಲ” ಎಂದು ಸಚಿವ ಜೋಶಿ ತಿಳಿಸಿದರು.