ಬೆಂಗಳೂರು: ನಕಲಿ ಜಾತಿ ಪ್ರಮಾಣ ಪತ್ರದ ಮೂಲಕ ಸೌಲಭ್ಯ ಪಡೆಯುವ ಯತ್ನ ಶಿಕ್ಷಾರ್ಹವಾಗಿದೆ ಎಂದು ತಿಳಿಸಿರುವ ಹೈಕೋರ್ಟ್, ಪರಿಶಿಷ್ಟ ಜಾತಿಗೆ ಸೇರಿದ ಆದಿ ದ್ರಾವಿಡ ಎಂದು ನಕಲಿ ಜಾತಿ ಪ್ರಮಾಣ ಪತ್ರ ಪಡೆದ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪಮುಕ್ತಿಗೊಳಿಸಲು ಕೋರಿ ಕ್ರಿಶ್ಚಿಯನ್ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಬೆಂಗಳೂರಿನ ನಾಗೇನಹಳ್ಳಿಯ ಸಿ ಸುಮಲತಾ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಯನ್ನು ವಿಚಾರಣೆ ನಡೆಸಿ ನ್ಯಾಯಮೂರ್ತಿ ಜೆ ಎಂ ಖಾಜಿ ಅವರ ಏಕಸದಸ್ಯ ಪೀಠ ತಿರಸ್ಕರಿಸಿದೆ.
ಅರ್ಜಿದಾರರು ನಕಲಿ ಜಾತಿ ಪ್ರಮಾಣ ಪತ್ರ ಪಡೆದಿದ್ದು, ಸಾಹೀರಾ ಬಾನು ಎಂಬುವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ನಿಷೇಧ ಕಾಯಿದೆ ಅಡಿ ಪ್ರಕರಣ ದಾಖಲಿಸಿದ್ದಾರೆ. ಇದು ಕಾಯಿದೆಯ ನಿಬಂಧನೆಯನ್ನು ದುರ್ಬಳಕೆ ಮಾಡಿದಂತಾಗಿದೆ. ಅಲ್ಲದೆ, ಇದೇ ಪ್ರಮಾಣ ಪತ್ರ ಪಡೆದು ಭವಿಷ್ಯದಲ್ಲಿ ಅದರ ಲಾಭ ಪಡೆಯುವ ಸಾಧ್ಯತೆ ಇದೆ. ಇದರಿಂದ ಎಸ್‌ಸಿ/ಎಸ್‌ಟಿ ಸಮುದಾಯವರಿಗೆ ಸಿಗಬೇಕಿರುವ ಸೌಲಭ್ಯದಿಂದ ವಂಚಿತಗೊಳಿಸುವ ಸಾಧ್ಯತೆ ಇದೆ ಎಂದು ಪೀಠ ಹೇಳಿದೆ.
ಅಲ್ಲದೆ, ಅರ್ಜಿದಾರರಾದ ಸುಮಲತಾ ವಿರುದ್ಧ ಪ್ರಕ್ರಿಯೆ ಮುಂದುವರಿಸಲು ಮೇಲ್ನೋಟಕ್ಕೆ ದಾಖಲೆಗಳು ಇವೆ. ಈ ಹಿನ್ನೆಲೆಯಲ್ಲಿ ವಿಚಾರಣಾಧೀನ ನ್ಯಾಯಾಲಯವು ಸುಮಲತಾ ಅವರು ಆರೋಪ ಮುಕ್ತಗೊಳಿಸಲು ಕೋರಿರುವ ಅರ್ಜಿ ವಜಾಗೊಳಿಸಿರುವುದು ಸರಿಯಾಗಿದೆ ಎಂದು ಆದೇಶಿಸಿದೆ.
Laxmi News 24×7