ರಾಮನಗರ: ದಿವಂಗತ ಮುತ್ತಪ್ಪ ರೈ ಅವರ ಕಿರಿಯ ಪುತ್ರ ರಿಕ್ಕಿ ರೈ ಅವರ ಮೇಲೆ ದುಷ್ಕರ್ಮಿ ಗುಂಡಿನ ದಾಳಿ ನಡೆಸಿರುವ ಘಟನೆ ಶುಕ್ರವಾರ ರಾತ್ರಿ ಬಿಡದಿ ಬಳಿ ನಡೆದಿದೆ. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಕ್ಕಿ ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ಕಾರು ಚಾಲಕ ಬಸವರಾಜು ನೀಡಿರುವ ದೂರಿನ ಮೇರೆಗೆ ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧ ಸೇರಿದಂತೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಚಾಲಕ ನೀಡಿದ ದೂರಿನಲ್ಲಿ ಏನಿದೆ?: ಮುತ್ತಪ್ಪ ರೈ ಅವರ ಎರಡನೇ ಪತ್ನಿ ಅನುರಾಧ, ರಾಕೇಶ್ ಮಲ್ಲಿ, ನಿತೇಶ್ ಎಸ್ಟೇಟ್ ಮಾಲೀಕರಾದ ನಿತೇಶ್ ಶೆಟ್ಟಿ ಹಾಗೂ ವೈದ್ಯನಾಥನ್ ಹಾಗೂ ಅವರ ಅನುಯಾಯಿಗಳ ಮೇಲೆ ಅನುಮಾನವಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ
ಎಂದು ಪೊಲೀಸರು ತಿಳಿಸಿದ್ದಾರೆ.”ನಾನು ಕಳೆದ ನಾಲ್ಕೈದು ವರ್ಷಗಳಿಂದ ರಿಕ್ಕಿ ರೈ ಅವರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ತಮಗೆ ಜೀವ ಬೆದರಿಕೆ ಇರುವುದಾಗಿ ಹಲವು ಸಲ ರಿಕ್ಕಿ ಅವರು ಹೇಳಿದ್ದರು. ಅಲ್ಲದೆ, ಜಾಗರೂಕತೆಯಿಂದ ಇರುತ್ತಿದ್ದರು. ನಾವು ಮನೆಯ ಗೇಟ್ ದಾಟಿ ಹೊರಬರುತ್ತಿದ್ದಂತೆ ಕಾರಿನಲ್ಲಿ ನಾನು ಕುಳಿತಿರುವ ಕಡೆಯಿಂದಲೇ ಏಕಾಏಕಿ ಗುಂಡು ಹಾರಿಸಲಾಗಿದ್ದು, ನಾನು ಪಾರಾದೆ. ಆದರೆ ರಿಕ್ಕಿ ರೈ ಅವರ ಮೂಗು ಹಾಗೂ ಬಲತೋಳಿಗೆ ತೀವ್ರ ಗಾಯಗಳಾಯಿತು. ಅವರನ್ನು ಕೂಡಲೇ ಬಿಡದಿಯ ಆಸ್ಪತ್ರೆಯೊಂದಕ್ಕೆ ಸೇರಿಸಿ, ಪ್ರಥಮ ಚಿಕಿತ್ಸೆ ಬಳಿಕ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು.
ಈ ಹಿಂದೆ ರಿಕ್ಕಿ ಅವರ ತಂದೆ ಮುತ್ತಪ್ಪ ರೈ ಅವರಿಗೂ ಹಲವು ವಿರೋಧಿಗಳಿದ್ದು, ಅವರ ಮೇಲೆಯೂ ಕೊಲೆ ಯತ್ನ ನಡೆಸಿ ವಿಫಲರಾಗಿದ್ದರು. ರಿಕ್ಕಿ ಮೇಲೆ ಗುಂಡಿನ ದಾಳಿ ಸಂಚಿನಲ್ಲಿ ರಾಕೇಶ್ ಮಲ್ಲಿ, ಅನುರಾಧ ಹಾಗೂ ಎಸ್ಟೇಟ್ ಮಾಲೀಕರಾದ ನಿತೇಶ್ ಶೆಟ್ಟಿ ಹಾಗೂ ವೈದ್ಯನಾಥನ್ ಮೇಲೆ ಅನುಮಾನವಿದ್ದು, ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ದೂರಿನಲ್ಲಿ ಚಾಲಕ ಬಸವರಾಜು ಮನವಿ ಮಾಡಿದ್ದಾರೆ.