ಬೆಂಗಳೂರು : ಸಿಬಿಐ ಅಧಿಕಾರಿ ಅಂತಾ ಸುಳ್ಳು ಮಾಹಿತಿ ನೀಡಿ ಕೊರಿಯರ್ಲ್ಲಿ ಡ್ರಗ್ಸ್ ತರಿಸಿಕೊಂಡಿದ್ದೀರ ಎಂಬುದಾಗಿ ವ್ಯಕ್ತಿಯೊಬ್ಬರಿಗೆ ಬೆದರಿಕೆ ಹಾಕಿ 5.80 ಲಕ್ಷ ಹಣ ಪಡೆದು ವಂಚಿಸಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ತಮಿಳುನಾಡು ಮೂಲದ ಶಿಕ್ಷಕನೊಬ್ಬನಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ತಮಿಳುನಾಡಿನ ತಿರುವರೂರ್ ನಿವಾಸಿ ಕೆ.ಅರುವೊಳ್ಳಿ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೆ, ಅರ್ಜಿದಾರರ ವಿರುದ್ಧದ ಅಪರಾಧ ಪ್ರಕರಣಗಳಿಗೆ ಗರಿಷ್ಠ ಏಳು ವರ್ಷ ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಅರ್ಜಿದಾರನಿಗೆ ಕ್ರಿಮಿನಲ್ ಹಿನ್ನೆಲೆಯೂ ಇಲ್ಲ. ಅರ್ಜಿದಾರ ಶಾಲಾ ಶಿಕ್ಷಕನಾಗಿದ್ದಾರೆ. ತನಿಖೆಯೂ ಪೂರ್ಣಗೊಂಡು, ದೋಷಾರೋಪ ಪಟ್ಟಿಯೂ ಸಲ್ಲಿಕೆಯಾಗಿದೆ. ಬಂಧನದಲ್ಲಿ ಮುಂದುವರಿಯುವ ಅಗತ್ಯವಿಲ್ಲ. ಆದ್ದರಿಂದ ಜಾಮೀನು ನೀಡಲಾಗುತ್ತಿದೆ ಎಂದು ಪೀಠ ಹೇಳಿದೆ.
ಜತೆಗೆ, ಒಂದು ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ನೀಡಬೇಕು. ಅಧೀನ ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕು. ಪ್ರಾಸಿಕ್ಯೂಷನ್ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು. ಭವಿಷ್ಯದಲ್ಲಿ ಇದೇ ಮಾದರಿಯ ಪ್ರಕರಣದಲ್ಲಿ ಭಾಗಿಯಾಗಬಾರದು ಎಂದು ಷರತ್ತು ವಿಧಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಮಂಗಳೂರು ಮೂಲದ ಚಂದನ್ ಉಪ್ಪಿನ್ ಎಂಬುವರಿಗೆ ಆಕಾಶ್ ಶರ್ಮಾ ಎಂಬ ಹೆಸರಿನಲ್ಲಿ ಆ.6ರಂದು ಮಧ್ಯಾಹ್ನ 12 ಗಂಟೆಗೆ ನನಗೆ ಮೊಬೈಲ್ ಕರೆ ಮಾಡಿ, ತಾನು ಫೆಡೆಕ್ಸ್ ಕೊರಿಯರ್ ಮುಂಬೈ ಬ್ರಾಂಚ್‌ನಿಂದ ಮಾತನಾಡುತ್ತಿದ್ದೇನೆ. ನಿಮಗೆ ಮುಂಬೈ ಕಸ್ಟಮ್ಸ್‌ನಲ್ಲಿ ಪಾರ್ಸೆಲ್ ಇದ್ದು, ಅದು ರಿಜೆಕ್ಟ್ ಆಗಿರುತ್ತದೆ. ಕಾರಣ ಅದರಲ್ಲಿ ಅಕ್ರಮವಾಗಿ ಪಾಸ್‌ಪೋರ್ಟ್ ಮತ್ತು ಡ್ರಗ್ಸ್ ಇರುತ್ತದೆ ಎಂದು ಬೆದರಿಕೆ ಹಾಕಿದ್ದರು.
Laxmi News 24×7