ಬೆಳಗಾವಿ: ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ದಿಗ್ಗಜ, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಕ್ಕೆ ಒಂದು ಹೊಸ ಆಯಾಮ ತಂದುಕೊಟ್ಟ ಕುಮಾರ ಗಂಧರ್ವರು ಬೆಳಗಾವಿ ಜಿಲ್ಲೆ ಸುಳೇಭಾವಿ ಗ್ರಾಮದವರು.
ಕುಮಾರ್ ಗಂಧರ್ವರ ಮೂಲ ಹೆಸರು ಶಿವಪುತ್ರಯ್ಯ ಸಿದ್ದರಾಮಯ್ಯ ಕೊಂಕಾಳಿಮಠ. ಸಾಧನೆಯ ಶಿಖರವನ್ನೇರಿ ‘ಕುಮಾರ ಗಂಧರ್ವ’ ಎಂಬ ಬಿರುದಾಂಕಿತರಾಗಿದ್ದ ಅವರ ಅದ್ಭುತವಾದ ಸಂಗೀತ ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಹೊಸ ದಿಕ್ಕನ್ನೇ ನೀಡಿದ್ದು ಇತಿಹಾಸ. ಅವರ ಕೊಡುಗೆಗಳು ಸಂಗೀತ ಪ್ರಿಯರಿಗೆ ಇಂದಿಗೂ ಪ್ರೇರಣಾದಾಯಕ ಎಂಬುದು ವಿಶೇಷ. ಆದರೆ, ಕರ್ನಾಟಕ ಸರ್ಕಾರ ಅವರ ಸಾಧನೆ ಗುರುತಿಸಿ, ಗೌರವಿಸದೇ ಇರುವುದು ಈ ಭಾಗದ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
1924ರ ಏಪ್ರಿಲ್ 8ರಂದು ಜನಿಸಿದ ಕುಮಾರ ಗಂಧರ್ವ ಅವರು 1992 ಜನವರಿ 12ರಂದು ನಿಧನರಾಗುತ್ತಾರೆ. ನಿನ್ನೆ ಏಪ್ರಿಲ್ 8 ಅವರಿಗೆ ಜನ್ಮ ಶತಮಾನೋತ್ಸವ. ಆ ನಿಮಿತ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶೇಷ ಕಾರ್ಯಕ್ರಮದ ಮೂಲಕ ಅವರನ್ನು ಸ್ಮರಿಸಬೇಕಿತ್ತು. ಆದರೆ, ತಮ್ಮ ರಾಜಕಾರಣದ ಒತ್ತಡದಲ್ಲಿ ಸಂಗೀತ ದಿಗ್ಗಜನ ಮರೆತಿದ್ದಾರೆ ಎಂಬ ನೋವು ಇಲ್ಲಿನ ಜನರದ್ದು.
ಸಂಗೀತದಲ್ಲಿನ ಅವರ ನವೀನ ಪ್ರಯೋಗಗಳು ಅನನ್ಯ ಕೊಡುಗೆಗಳಾಗಿ ದಾಖಲಾಗಿರುವುದು ಸ್ಮರಣೀಯ. ಅವರ ಸಂಗೀತದಲ್ಲಿ ಲೋಕ ಗೀತೆಗಳು, ಭಜನೆ ಮತ್ತು ಶಾಸ್ತ್ರೀಯ ರಾಗಗಳ ಸಮ್ಮೀಲನ ಕಂಡು ಬರುವುದು ಒಂದೆಡೆಯಾದರೆ, ಸಂತ ಕಬೀರ, ಮೀರಾಬಾಯಿ, ತುಳಸಿದಾಸರ ಕೃತಿಗಳನ್ನು ತಮ್ಮ ಸಂಗೀತದ ಮೂಲಕ ಜನಪ್ರಿಯಗೊಳಿಸಿದ ಕೀರ್ತಿಯೂ ಗಂಧರ್ವರರಿಗೆ ಸಲ್ಲುತ್ತದೆ.
ತಂದೆ ಸಿದ್ಧರಾಮಯ್ಯ ಸ್ವತಃ ಸಂಗೀತಗಾರರಾಗಿದ್ದರು. ಸೋದರಮಾವ ಕಲ್ಲಯ್ಯಸ್ವಾಮಿ ಸಂಬರಗಿಮಠ ಶಿರಹಟ್ಟಿ ಅವರು ವೆಂಕೋಬರಾಯರ ನಾಟಕ ಕಂಪನಿ, ವಾಮನರಾವ ಮಾಸ್ತರರ ನಾಟಕ ಕಂಪನಿ ಮತ್ತು ಸೀಮೀಕೇರಿ ನಾಟಕ ಕಂಪನಿಗಳಲ್ಲಿ ಗಾಯಕ ನಟರಾಗಿದ್ದರು. ಅವರು ಕುಮಾರ ಗಂಧರ್ವರಿಗೆ ನಾಲ್ಕು ವರ್ಷದವರಿದ್ದಾಗಲೇ ಸಂಗೀತದೀಕ್ಷೆ ನೀಡಿದರು. ಆ ಮೇಲೆ, ತಂದೆ ಜವಾಬ್ದಾರಿ ವಹಿಸಿಕೊಂಡರು. ಐದು ವರ್ಷದ ಬಾಲಕನಾಗಿದ್ದಾಗ ದಾವಣಗೆರೆಯಲ್ಲಿ ಪ್ರಥಮ ಕಚೇರಿ ನೀಡಿದರು. ಅದೊಂದು ದಾಖಲೆ. ಆರು ವರ್ಷವಿದ್ದಾಗ ಅ ಅವರ ಗಾಯನ ಕೇಳಿ ಗುಲ್ಬರ್ಗಾ ಜಿಲ್ಲೆಯ ಗುರುಕಲ್ಮಠದ ಶಾಂತವೀರ ಸ್ವಾಮಿಗಳು “ಓಹೋ! ಇವನು ಕುಮಾರ ಗಂಧರ್ವ” ಎಂದು ಉದ್ಗರಿಸಿದರು. ಆ ಹೆಸರೇ ಸ್ಥಿರವಾಯಿತು. ಅದೇ ಅವರ ಖಾಯಂ ಆಗಿ ಉಳಿಯಿತು.
Laxmi News 24×7