ಬೆಂಗಳೂರು: ರಾಜ್ಯ ಸರ್ಕಾರ ಕೆಲವು ದಿನಗಳ ಹಿಂದೆ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ಗೆ 4 ರೂಪಾಯಿ ಹೆಚ್ಚಿಸಿತ್ತು. ಏಪ್ರಿಲ್ 1ರಿಂದ ಪರಿಷ್ಕೃತ ದರ ಜಾರಿಗೆ ಬಂದಿದೆ. ಇದರ ಪರಿಣಾಮ, ಅನೇಕ ಹೋಟೆಲ್‌ಗಳು ಕಾಫಿ ಮತ್ತು ಚಹಾ ದರ ಏರಿಸಿವೆ. ಬೆಲೆ ಏರಿಕೆ ಬಿಸಿ ಇದೀಗ ಗ್ರಾಹಕರಿಗೆ ತಟ್ಟಿದೆ.
ಬೆಂಗಳೂರಿನ ಬಹುತೇಕ ಹೋಟೆಲ್‌ಗಳು, ಕೆಫೆಗಳು ಮತ್ತು ಟೀ ಸ್ಟಾಲ್‌ಗಳಲ್ಲಿ ಒಂದು ಕಪ್ ಚಹಾ ಮತ್ತು ಕಾಫಿಯ ಬೆಲೆಯನ್ನು 3 ರೂ.ನಿಂದ 10 ರೂ.ವರೆಗೆ ಏರಿಸಿವೆ. ವಿದ್ಯುತ್ ದರ, ಇಂಧನ ದರ ಮತ್ತು ತ್ಯಾಜ್ಯ ಸಂಗ್ರಹ ಶುಲ್ಕ ಹೆಚ್ಚಳ ಅಗತ್ಯ ಸರಕು ಮತ್ತು ಸೇವೆಗಳ ಬೆಲೆ ಏರಿಕೆಗೆ ಕಾರಣವಾಗಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಹೆಚ್ಚು ಬಳಸುವ ಹೋಟೆಲ್ ಉದ್ಯಮಕ್ಕೆ ಇದು ಹೊರೆಯಾಗಿದೆ.
ಅನೇಕ ಹೋಟೆಲ್‌ಗಳು ಮತ್ತು ಟೀ ಸ್ಟಾಲ್‌ಗಳು ಈಗಾಗಲೇ ತಮ್ಮ ಮೆನುವಿನಲ್ಲಿ ಬೆಲೆಗಳನ್ನು ಪರಿಷ್ಕರಿಸಿವೆ.
“ಹಾಲು ಮತ್ತು ಇತರ ವಸ್ತುಗಳ ಬೆಲೆ ಏರಿಕೆಯಿಂದಾಗಿ, ನಾವೂ ದರ ಹೆಚ್ಚಿಸಿದ್ದೇವೆ. ಗ್ರಾಹಕರು ಸಹಕಾರಿಸುವಂತೆ ವಿನಂತಿ” ಎಂದು ಬೆಂಗಳೂರಿನ ಟೀ ಸ್ಟಾಲ್‌ವೊಂದರ ಹೊರಗೆ ಫಲಕ ಹಾಕಲಾಗಿದೆ.
ಕಾಫಿ ಪ್ರಿಯರಿಗೆ ಡಬಲ್ ಶಾಕ್: ಹಾಲಿನ ದರ ಏರಿಕೆಯ ಜೊತೆಗೆ ಕಾಫಿ ಪುಡಿಯ ಬೆಲೆಯೂ ಹೆಚ್ಚಾಗಿದೆ. ಕಾಫಿ ಉದ್ಯಮದ ಮೂಲಗಳ ಪ್ರಕಾರ, ಇತ್ತೀಚಿನ ವಾರಗಳಲ್ಲಿ ಬೆಲೆ ಪ್ರತಿ ಕೆ.ಜಿ.ಗೆ 100 ರೂ.ಗಳಷ್ಟು ಹೆಚ್ಚಾಗಿದೆ ಮತ್ತು ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಇದು ಸಣ್ಣ ಟೀ ಅಂಗಡಿ ನಡೆಸುವವರು ಮತ್ತು ಹೋಟೆಲ್ ನಡೆಸುವವರಿಗೆ ಮತ್ತಷ್ಟು ಹೊರೆಯಾಗಿದೆ. ಇದರಿಂದ ವ್ಯಾಪಾರಿಗಳು ಕಾಫಿ, ಟೀ ದರ ಹೆಚ್ಚಿಸಿ ತಮ್ಮ ಹೊರೆಯನ್ನು ಗ್ರಾಹಕರ ಮೇಲೆ ಹಾಕುತ್ತಿದ್ದಾರೆ.
Laxmi News 24×7