ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ ಮುಂದುವರೆಸಬೇಕು, ಯಾವುದೇ ಸಡಿಲಿಕೆ ಇರಬಾರದು ಎಂದು ಆಗ್ರಹಿಸಿ ಪರಿಸರಪ್ರೇಮಿಗಳು ಇಂದು ಬೃಹತ್ ಕಾಲ್ನಡಿಗೆ ಜಾಥಾ ನಡೆಸಿದರು.
ಕೇರಳಕ್ಕೆ ಹಾದುಹೋಗುವ ಕಗ್ಗಳದಹುಂಡಿ ಗೇಟ್ನಿಂದ ಮದ್ದೂರು ಚೆಕ್ಪೋಸ್ಟ್ ವರೆಗೆ ಪರಿಸರ ಹೋರಾಟಗಾರರು, ರೈತರು, ಟೆಕ್ಕಿಗಳು, ಕೇರಳದ ಪರಿಸರ ಹೋರಾಟಗಾರರು, ಸ್ಥಳೀಯ ಯುವಕರು ಸೇರಿದಂತೆ ಸಹಸ್ರಾರು ಮಂದಿ ಜಾಥಾದಲ್ಲಿ ಭಾಗಿಯಾದರು.
ಕೇರಳದ ವಯನಾಡ್ ಪ್ರಕೃತಿ ಸಂರಕ್ಷಣಾ ಸಮಿತಿಯ ಬಾದೂಷಾ ಮಾತನಾಡಿ, “ನಾವು ಕೂಡ ರಾತ್ರಿ ಸಂಚಾರ ಬೇಡ ಎಂದೇ ಹೇಳುತ್ತಿದ್ದೇವೆ. ರಾತ್ರಿ ಸಂಚಾರ ಆರಂಭಗೊಂಡರೆ ಹವಾಲಮನಿ, ಗೋಲ್ಡ್ ಸ್ಮಗ್ಲಿಂಗ್ ನಡೆಯುತ್ತದೆ. ವಯನಾಡಿನ ಬಹುತೇಕ ಮಂದಿ ರಾತ್ರಿ ಸಂಚಾರ ಬೇಡ ಎನ್ನುತ್ತಿದ್ದಾರೆ. ಆದರೆ ಬೆರಳೆಣಿಕೆ ಮಂದಿ ಕೇಳುತ್ತಿದ್ದಾರೆ ಅಷ್ಟೇ. ಕರ್ನಾಟಕ ಸರ್ಕಾರ ಯಾವುದೇ ಕಾರಣಕ್ಕೂ ರಾತ್ರಿ ಸಂಚಾರಕ್ಕೆ ಅವಕಾಶ ಕೊಡಬಾರದು” ಎಂದು ಒತ್ತಾಯಿಸಿದರು.ರೈತ ಮುಖಂಡ ಹಳ್ಳಿಕೆರೆಹುಂಡಿ ಭಾಗ್ಯರಾಜು ಮಾತನಾಡಿ, “ಕ್ರಾಂತಿ ಇಲ್ಲದೆ ಶಾಂತಿ ಸ್ಥಾಪನೆ ಸಾಧ್ಯವಿಲ್ಲ. ಶಾಂತಿಯಿಂದ ಹೋರಾಟ ಮಾಡಿದರೆ ಇಲ್ಲಿ ಯಾರಿಗೂ ಕಿವಿ ಕೇಳುವುದಿಲ್ಲ. ನಮ್ಮ ಭಾಗದ ಪರಿಸರ ಹಾಳು ಮಾಡುತ್ತಿರುವವರಿಗೆ ಬುದ್ಧಿ ಕಲಿಸಬೇಕು. ಕೇರಳ ಸರ್ಕಾರದ ಒತ್ತಡಕ್ಕೆ ಮಣಿಯಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಸರ್ಕಾರ, ಲೋಕಸಭಾ ಸದಸ್ಯರು ಇಲ್ಲಿನ ನೈಜತೆ ತಿಳಿಸಬೇಕು” ಎಂದು ಹೇಳಿದರು.
Laxmi News 24×7