ಬೆಂಗಳೂರು : ಗಡಿ ಜಿಲ್ಲೆ ಬೆಳಗಾವಿಯಲ್ಲಿ ತಗಾದೆ ತೆಗೆಯುತ್ತಿರುವ ಮರಾಠಿ ಸಂಘಟನೆಗಳಿಗೆ ಎಚ್ಚರಿಕೆ ನೀಡಲು ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ಗೆ ಬೆಂಗಳೂರಿನಲ್ಲಿ ಆರಂಭದಲ್ಲೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳಗ್ಗೆಯಿಂದಲೇ ಸಾರ್ವಜನಿಕರ ಸಂಚಾರ ಎಂದಿನಂತಿದ್ದು, ಆಟೋ, ಬಸ್ಗಳು ರಸ್ತೆಗಿಳಿದಿವೆ. ಬಂದ್ ಯಶಸ್ಸಿಗಾಗಿ ಸಾರ್ವಜನಿಕರು ಹಾಗೂ ವ್ಯಾಪಾರಿಗಳ ಬಳಿ ಕನ್ನಡ ಪರ ಸಂಘಟನೆಗಳು ಮನವಿ ಮಾಡಿದ್ದವು. ಆದರೆ ಬಹುತೇಕ ಸಂಘಟನೆಗಳಿಂದ ನೈತಿಕ ಬೆಂಬಲವಷ್ಟೇ ದೊರೆತಿರುವುದರಿಂದ ಎಂದಿನಂತೆಯೇ ಸಾರ್ವಜನಿಕರು, ಸಾರಿಗೆ ವಾಹನಗಳ ಸಂಚಾರ ಆರಂಭವಾಗಿದೆ. 9 ಗಂಟೆ ಬಳಿಕ ಬಂದ್ನ ತೀವ್ರತೆ ಹೆಚ್ಚಾದರೆ ಪರಿಸ್ಥಿತಿ ಬದಲಾಗುವ ಸಾಧ್ಯತೆಯಿದೆ.
ಬಂದ್ಗೆ ಬೆಂಬಲ ನೀಡದವರಿಗೆ ಗುಲಾಬಿ ಹೂ ವಿತರಣೆ : ಬಂದ್ಗೆ ಬೆಂಬಲ ನೀಡುವುದಿಲ್ಲ ಎಂದಿರುವ ಕರ್ನಾಟಕ ಸಂಘಟನೆಗಳ ಸಮಿತಿ ಮತ್ತು ಕರುನಾಡ ಕಾರ್ಮಿಕರ ಸೇನೆ ಸದಸ್ಯರು, ಎಂದಿನಂತೆ ಸಂಚರಿಸುವ ವಾಹನ ಸವಾರರಿಗೆ ಗುಲಾಬಿ ಹೂವು ನೀಡುವ ಮೂಲಕ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಎಂದಿನಂತೆ ದೈನಂದಿನ ಕೆಲಸ ಕಾರ್ಯಗಳತ್ತ ಮುಖಮಾಡಿರುವ ಸಾರ್ವಜನಿಕರಿಗೆ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಗುಲಾಬಿ ಹೂವು ವಿತರಿಸಲಾಗಿದೆ.ಸಾರ್ವಜನಿಕರಿಗೆ ತೊಂದರೆಯಾಗುವ ಬಂದ್ಗೆ ಬೆಂಬಲವಿಲ್ಲ : “ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗುವಂಥಹ ಬಂದ್ ನಮಗೆ ಬೇಡ. ಬೆಳಗಾವಿಯಲ್ಲಿ ನಡೆದಿರುವ ಘಟನೆಗೆ ಬೆಳಗಾವಿಯಲ್ಲೇ ಹೋರಾಟ ಮಾಡಲು ಸಿದ್ಧರಿದ್ದೇವೆ ಅಥವಾ ವಿಧಾನಸೌಧ ಚಲೋ, ಮಂತ್ರಿಗಳ ಮನೆ ಮುತ್ತಿಗೆ ಬೇಕಿದ್ದರೆ ಮಾಡೋಣ. ಅದನ್ನು ಬಿಟ್ಟು ಸಾರ್ವಜನಿಕರು, ವ್ಯಾಪಾರಿಗಳಿಗೆ ತೊಂದರೆಯಾಗುವಂಥಹ ಬಂದ್ಗೆ ನಮ್ಮ ಬೆಂಬಲವಿಲ್ಲ” ಎಂದು ಕರ್ನಾಟಕ ಸಂಘಟನೆಗಳ ಸಮಿತಿ ಮತ್ತು ಕರುನಾಡ ಕಾರ್ಮಿಕರ ಸೇನೆಯ ಮುಖಂಡ ಬೆಟ್ಟಸ್ವಾಮಿ ಗೌಡ ಹೇಳಿದ್ದಾರೆ.