ಸಮುದಾಯಗಳ ನಡುವೆ ಘರ್ಷಣೆ, ಕಲ್ಲು ತೂರಾಟ: ಬೆಳಗಾವಿ ಬೆಕ್ಕೇರಿ ಗ್ರಾಮದಲ್ಲಿ ಹೈ ಅಲರ್ಟ್
ರಾಯಬಾಗ ತಾಲೂಕಿನ ಬೆಕ್ಕೇರಿ ಗ್ರಾಮದಲ್ಲಿ ಅದ್ದೂರಿಯಾಗಿ ಹೋಳಿ ಹಬ್ಬ ಆಚರಣೆ ಮಾಡಿದ್ದಾರೆ. ಇದೇ ಹೋಳಿ ಕುರಿತು ಓರ್ವ ಯುವಕ ವಾಟ್ಸಾಪ್ ಸ್ಟೇಟಸೊಂದನ್ನು ಹಾಕಿಕೊಂಡಿದ್ದಾನೆ. ಅದರಲ್ಲಿ ಅಂಬೇಡ್ಕರ್ ಕುರಿತು ಕೂಡ ಬರೆದು ಹಾಕಿದ್ದು, ಬೇರೊಂದು ಸಮುದಾಯದ ಯುವಕರನ್ನು ಕೆರಳಿಸುವಂತೆ ಮಾಡಿದೆ. ಇದರಿಂದ ಇಂದು ಇಡೀ ಗ್ರಾಮದಲ್ಲಿ ನಡೆಯಬಾರದ ಘಟನೆ ನಡೆದು ಹೋಗಿದೆ. ಆಗಿದ್ದೇನು ಎಂಬ ಮಾಹಿತಿ ಇಲ್ಲಿದೆ.

ಸಮುದಾಯಗಳ ನಡುವೆ ಘರ್ಷಣೆ, ಕಲ್ಲು ತೂರಾಟ: ಬೆಳಗಾವಿ ಬೆಕ್ಕೇರಿ ಗ್ರಾಮದಲ್ಲಿ ಹೈ ಅಲರ್ಟ್
ಬೆಕ್ಕೇರಿ ಗ್ರಾಮದಲ್ಲಿ ಪ್ರತಿಭಟನಾನಿರತ ಯುವಕರು
ಬೆಳಗಾವಿ (Belagavi) ಜಿಲ್ಲೆಯ ರಾಯಬಾಗ ತಾಲೂಕಿನ ಬೆಕ್ಕೇರಿ ಗ್ರಾಮ (Bekkeri Village) ಜನ ಭರ್ಜರಿಯಾಗಿ ಹೋಳಿ ಆಚರಿಸಿ ಕುಣಿದು ಕುಪ್ಪಳಿಸಿ ಮನೆಗೆ ತೆರಳಿದ್ದರು. ಇದಾದ ಕೆಲ ಹೊತ್ತಿನಲ್ಲೇ ಯುವಕನೊಬ್ಬ ವಾಟ್ಸಾಪ್‌ನಲ್ಲಿ ಅಂಬೇಡ್ಕರ್ ಕುರಿತು ಸ್ಟೇಟಸ್ ಹಾಕಿಕೊಂಡಿದ್ದಾನೆ. ಈ ವಿಚಾರಕ್ಕೆ ಎರಡು ಸಮುದಾಯದ ಯುವಕರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಸ್ಟೇಟಸ್ ಹಾಕಿ ಕೊಂಡಿದ್ದ ಯುವಕ ಮತ್ತಷ್ಟು ಯುವಕರನ್ನು ಕರೆದುಕೊಂಡು ಬಂದು ಅಂಬೇಡ್ಕರ್ ಪ್ರತಿಮೆ ಸುತ್ತ ಹಾಕಲಾಗಿದ್ದ ಕಾಂಪೌಂಡ್ ಬೀಳಿಸಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆ ಅಂಬೇಡ್ಕರ್ ಕಾಲೋನಿಯ ಜನರು ಹಾಗೂ ಬೇರೊಂದು ಸಮುದಾಯದ ಜನರ ನಡುವೆ ಕಲ್ಲು ತೂರಾಟ ನಡೆದಿದೆ.

ಕಲ್ಲು ತೂರಾಟದಲ್ಲಿ ನಾಲ್ವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಪೊಲೀಸರು ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸಿ ಇಡೀ ಗ್ರಾಮವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಬೆಳಗಾವಿಯಿಂದ ಎರಡು ಡಿಆರ್ ತುಕಡಿ ಕೂಡ ರವಾನಿಸಲಾಗಿದೆ. ಗಲಾಟೆ ಹತೋಟಿಗೆ ಬಂದಿದ್ದರೂ ಬೂದಿ ಮುಚ್ಚಿದ ಕೆಂಡದಂತ ಪರಿಸ್ಥಿತಿ ಗ್ರಾಮದಲ್ಲಿದೆ. ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
Laxmi News 24×7