ರಾಯಚೂರು : “ಬೇಸಿಗೆ ಬಿಸಿಲಿನ ತಾಪ ಹೆಚ್ಚಳ ಹಿನ್ನೆಲೆ ಸರ್ಕಾರಿ ನೌಕರರ ಕೆಲಸದ ಸಮಯ ಬದಲಾವಣೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಲಿದ್ದು, ಬಿಸಿಲು ಇರುವುದರಿಂದ ಮಧ್ಯಾಹ್ನದ ಹೊತ್ತು ಕ್ಷೇತ್ರ ಭೇಟಿ ಮಾಡುವುದನ್ನು ಬಿಡಬೇಕು” ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಜಿಲ್ಲೆಯ ಮಾನವಿ ಪಟ್ಟಣದಲ್ಲಿ ಆಯೋಜಿಸಿದ್ದ ಬೃಹತ್ ಆರೋಗ್ಯ ಮೇಳದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸರ್ಕಾರಿ ನೌಕರರು ಮಧ್ಯಾಹ್ನ 12 ರಿಂದ 3ರ ವರೆಗೆ ಕ್ಷೇತ್ರ ಭೇಟಿ ಮಾಡಬಾರದು. ಬೆಳಗಿನಜಾವ ಅಥವಾ ಸಂಜೆ ಮಾಡಬೇಕು. ಸರ್ಕಾರ ರಜೆ ಕೊಡಬೇಕು ಅಂತ ಹೇಳುವುದಿಲ್ಲ, ಸಮಯ ಬದಲಾವಣೆ ಮಾಡಿಕೊಂಡರೆ ಒಳ್ಳೆಯದು. ಬಿಸಿಲಿನ ತಾಪ ಹೆಚ್ಚಳ ಹಿನ್ನೆಲೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಪೆಷಲ್ ವಾರ್ಡ್ ಅಗತ್ಯ ಇಲ್ಲ, ನಮ್ಮಲ್ಲಿ ಸೌಲಭ್ಯಗಳಿವೆ. ಈ ವರ್ಷ ಬಿಸಿಲಿನ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ. ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಈಗಾಗಲೇ ಸೂಚಿಸಿದ್ದೇವೆ” ಎಂದು ತಿಳಿಸಿದರು.
“ರಾಯಚೂರು ಜಿಲ್ಲೆ ಸೇರಿ ಕಲ್ಯಾಣ ಕರ್ನಾಟಕದ ಭಾಗದಲ್ಲಿ 43 ರಿಂದ 44 ಡಿಗ್ರಿ ಸೆಲ್ಸಿಯಸ್ವರೆಗೆ ತಾಪಮಾನ ತಲುಪಬಹುದು. 12 ರಿಂದ 3 ಗಂಟೆವರೆಗೆ ಅತಿ ಹೆಚ್ಚು ಬಿಸಿಲಿರುವ ಸಮಯವಾಗಿರುತ್ತದೆ. ಆ ಸಮಯದಲ್ಲಿ ಮನೆಯೊಳಗೆ ಅಥವಾ ಕಚೇರಿಯೊಳಗೆ ಇರುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಶಾಲೆಗಳು, ಸಂಸ್ಥೆಗಳು ಆ ಬಗ್ಗೆ ಗಮನ ಕೊಡಬೇಕು. ಆಹಾರದ ಬಗ್ಗೆಯೂ ಗಮನ ಕೊಡಬೇಕು. ಎಣ್ಣೆ ಪದಾರ್ಥ ಮತ್ತು ಅಜೀರ್ಣಕ್ಕೆ ಒಳಪಡಿಸುವಂತ ಆಹಾರಗಳನ್ನು ತ್ಯಜಿಸಬೇಕು. ಆಗಾಗ ನೀರು ಕುಡಿದರೆ ನಿರ್ಜಲೀಕರಣದಿಂದ ದೂರ ಇರಬಹುದು” ಎಂದರು.