ಬೆಳಗಾವಿ: ಪ್ರಾಕೃತಿಕ, ಧಾರ್ಮಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಗಡಿಜಿಲ್ಲೆ ಬೆಳಗಾವಿಯಲ್ಲಿ ಇರುವ ಪ್ರವಾಸಿ ತಾಣಗಳು ಸಾಕಷ್ಟು. ಆದರೆ, ಪ್ರಚಾರದ ಕೊರತೆ, ಮೂಲಸೌಕರ್ಯ ಅಭಾವ, ಆಡಳಿತ ಯಂತ್ರದ ತಾತ್ಸಾರ ನಿಲುವಿನಿಂದ ಇಲ್ಲಿ ಪ್ರವಾಸೋದ್ಯಮ ಸೊರಗಿದೆ.
ಸವದತ್ತಿಯ ಯಲ್ಲಮ್ಮನಗುಡ್ಡ, ಗೋಕಾಕ ಜಲಪಾತ, ಗೊಡಚಿನಮಲ್ಕಿ ಜಲಪಾತ, ಧೂಪದಾಳ ಪಕ್ಷಿಧಾಮ, ಚನ್ನಮ್ಮನ ಕಿತ್ತೂರು ಕೋಟೆ, ಖಾನಾಪುರ ತಾಲ್ಲೂಕಿನ ಹಲಸಿ ಸೇರಿದಂತೆ ಜಿಲ್ಲೆಯಲ್ಲಿ 98 ಪ್ರವಾಸಿ ತಾಣಗಳನ್ನು ಪ್ರವಾಸೋದ್ಯಮ ಇಲಾಖೆ ಗುರುತಿಸಿದೆ.
5.95 ಕೋಟಿ ಪ್ರವಾಸಿಗರ ಭೇಟಿ: 2023ರಲ್ಲಿ ಈ ತಾಣಗಳಿಗೆ 3,95,61,386 ಪ್ರವಾಸಿಗರು ಭೇಟಿ ನೀಡಿದ್ದರು. ಈ ಪೈಕಿ ವಿದೇಶಿಗರು 94 ಮಂದಿ ಮಾತ್ರ. 2024ರ ಜನವರಿ 1ರಿಂದ ಜೂನ್ 30ರ ವರೆಗೆ 2,00,02,093 ಪ್ರವಾಸಿಗರು ಭೇಟಿ ಕೊಟ್ಟಿದ್ದಾರೆ. ಇದರಲ್ಲಿ 25 ವಿದೇಶಿಗರು ಇದ್ದಾರೆ. ಒಂದೂವರೆ ವರ್ಷದಲ್ಲಿ ಜಿಲ್ಲೆಗೆ ಭೇಟಿ ನೀಡಿರುವ 5.95 ಕೋಟಿ ಪ್ರವಾಸಿಗರ ಪೈಕಿ ಯಲ್ಲಮ್ಮನಗುಡ್ಡಕ್ಕೆ ಮಾತ್ರ ಭೇಟಿ ಕೊಟ್ಟವರ ಸಂಖ್ಯೆಯೇ 2.44 ಕೋಟಿಗೂ ಅಧಿಕ.
ಉಳಿದಂತೆ ಇದೇ ಅವಧಿಯಲ್ಲಿ ಸವದತ್ತಿಯ ಜೋಗುಳಬಾವಿ ಸತ್ಯಮ್ಮನ ದೇವಸ್ಥಾನಕ್ಕೆ 1.54 ಕೋಟಿ, ಗೋಕಾಕ ಜಲಪಾತಕ್ಕೆ 17.27 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಉಳಿದ ಪ್ರವಾಸಿ ಸ್ಥಳಗಳಿಗೆ ಭೇಟಿ ಕೊಟ್ಟವರ ಸಂಖ್ಯೆ ಹೆಚ್ಚಿಲ್ಲ. ಹಲವು ತಾಣಗಳಿಗೆ ಒಬ್ಬ ಪ್ರವಾಸಿಗರೂ ಬಂದಿಲ್ಲ.
1924ರಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಿದ್ದ ಬೆಳಗಾವಿಯ ವೀರಸೌಧ ಈಗ ಶತಮಾನೋತ್ಸವ ಸಂಭ್ರಮದಲ್ಲಿದೆ. ಆದರೆ, ಕನಿಷ್ಠ ಮೂಲಸೌಕರ್ಯ ಇಲ್ಲದೆ ಬಳಲುತ್ತಿದೆ.
ಸವದತ್ತಿಯ ಯಲ್ಲಮ್ಮ ದೇವಸ್ಥಾನ ಸುಮಾರು 3 ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಕರ್ನಾಟಕ ಮಾತ್ರವಲ್ಲದೆ; ಮಹಾರಾಷ್ಟ್ರ, ಗೋವಾ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಿಂದ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಆದರೆ, ಮೂಲಸೌಕರ್ಯವೇ ಇಲ್ಲ. ಈಗ ಯಲ್ಲಮ್ಮನಗುಡ್ಡ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ರಚಿಸಿದ ಪ್ರಾಧಿಕಾರದ ಮೂಲಕ ಭಕ್ತರಿಗೆ ಹೆಚ್ಚಿನ ಸೌಕರ್ಯ ಸಿಗಬಹುದೆಂದು ನಿರೀಕ್ಷಿಸಲಾಗಿದೆ.
ಇನ್ನೂ ಮಳೆಗಾಲದಲ್ಲಿ ಮೈದುಂಬಿ ಹರಿಯುವ ಗೋಕಾಕ ಜಲಪಾತ, ಗೊಡಚಿನಮಲ್ಕಿ ಜಲಪಾತದಲ್ಲೂ ಸಾಲು ಸಾಲು ಸಮಸ್ಯೆಗಳಿವೆ. ಗೊಡಚಿನಮಲ್ಕಿ ಗ್ರಾಮದಿಂದ ಜಲಪಾತ ವೀಕ್ಷಣೆಗೆ 3 ಕಿ.ಮೀ. ದೂರವನ್ನು ನಡೆದುಕೊಂಡೇ ಕ್ರಮಿಸಬೇಕಿದೆ. ಆ ಮಾರ್ಗವೂ ಸುರಕ್ಷಿತವಾಗಿಲ್ಲ. ನಿರ್ಬಂಧವಿದ್ದರೂ ಪ್ರವಾಸಿಗರು ಗೋಕಾಕ ಜಲಪಾತದ ತುದಿಗೆ ಹೋಗಿ, ಫೋಟೊ ಕ್ಲಿಕ್ಕಿಸಿಕೊಳ್ಳುವುದು ಸಾಮಾನ್ಯವಾಗಿದೆ.