ಹಿರಿಯ ಪತ್ರಕರ್ತ ವಸಂತ ನಾಡಿಗೇರ ಹೃದಯಾಘಾತದಿಂದ ನಿಧನ
ಬೆಂಗಳೂರು,ಸೆ.9- ಕನ್ನಡದ ಹಿರಿಯ ಪತ್ರಕರ್ತ ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆ ಸಂಪಾದಕ ವಸಂತ ನಾಡಿಗೇರ (59) ಸೋಮವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ.ಮೃತರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಮೂಲತಃ ಹಾವೇರಿ ಜಿಲ್ಲೆ ರಾಣಿಬೆನ್ನೂರಿನವರಾದ ನಾಡಿಗೇರ್ ಅವರು ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ವಿಶ್ವವಾಣಿ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದರು.
ವಿಜಯ ಕರ್ನಾಟಕದಲ್ಲಿ ಅವರು ಶೀರ್ಷಿಕೆಗಳನ್ನು ಕೊಡುವುದರಲ್ಲಿ ಹಲವು ವಿನೂತನ ಪ್ರಯೋಗಗಳನ್ನು ಕೈಗೊಂಡು, ಕನ್ನಡ ಪತ್ರಿಕೋದ್ಯಮಕ್ಕೇ ಹೊಸ ಆಯಾಮ ನೀಡಿದ್ದರು. ಹಿಂದಿ ಚಿತ್ರರಂಗದ ಖ್ಯಾತ ಗಾಯಕಿ ಲತಾ ಮಂಗೇಶಕರ್ ಜೀವನ ಚರಿತ್ರೆಯನ್ನು ಕನ್ನಡದಲ್ಲಿ ಬರೆದಿದ್ದಾರೆ.
ವಸಂತ್ ನಾಡಿಗೇರ ಅವರು ಕಳೆದ ಮೂರುವರೆ ದಶಕದಿಂದ ಕನ್ನಡ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿದ್ದರು. ಅವರು ಶೀರ್ಷಿಕೆಗಳ ಮೂಲಕವೇ ಮನೆಮಾತಾಗಿದ್ದರು. ವಸಂತ ನಾಡಿಗೇರ ಅವರು ಕನ್ನಡ ಪ್ರಭ, ವಿಜಯಕರ್ನಾಟಕ, ವಿಶ್ವವಾಣಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ಇವರು ಕಳೆದ ಎರಡು ವರ್ಷಗಳಿಂದ ಸಂಯುಕ್ತ ಕರ್ನಾಟಕ ಸಂಪಾದಕರಾಗಿದ್ದರು.
ಅನಂತರ ಅವರು ಹಲವಾರು ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರಾದರೂ ಪುನಃ ತಮಗೆ ಕೆಲಸ ಕೊಟ್ಟಿದ್ದ ಮೊದಲ ಸಂಸ್ಥೆಯ ಮೇಲಿನ ಮಮಕಾರದಿಂದ ಮತ್ತೆ ಸಂಯುಕ್ತ ಕರ್ನಾಟಕಕ್ಕೆ ಹಿಂದಿರುಗಿದ್ದರು. ಸುದ್ದಿಯ ಮನೆಯಲ್ಲಿ ಸಾಮಾನ್ಯವಾಗಿ ಬರುವ ಒತ್ತಡದ ಸಮಯದಲ್ಲಿಯೂ ಸಮಾಧಾನದಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದರು.