ಹುಕ್ಕೇರಿ: ಇಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸರ್ಕಾರಿ ಕಾರ್ಯಕ್ರಮ ಆಯೋಜಿಸಲು ಸುಸಜ್ಜಿತ ಸಭಾಂಗಣ ಹುಡುಕುವುದೇ ಸಂಘಟಕರು ಹಾಗೂ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿತ್ತು. ಇನ್ಮುಂದೆ ಆ ಕೊರತೆ ನೀಗಲಿದೆ. ಅನಿವಾರ್ಯವಾಗಿ ಅವರು ಖಾಸಗಿ ಸಭಾಂಗಣಗಳತ್ತ ಮುಖಮಾಡುವುದು ತಪ್ಪಲಿದೆ.
ಪಟ್ಟಣದ ಹೊರವಲಯದ ಕ್ಯಾರಗುಡ್ಡದ ಕಾಲೇಜು ಕ್ಯಾಂಪಸ್ ಬಳಿ ತಲೆ ಎತ್ತಿರುವ ‘ಪ್ರಾದೇಶಿಕ ಸುವರ್ಣ ಕರ್ನಾಟಕ ಭವನ’ ಉದ್ಘಾಟನೆಗೆ ಸಜ್ಜಾಗಿದ್ದು, ಶೀಘ್ರವೇ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ.
ಹುಕ್ಕೇರಿಗೆ ಮಂಜೂರಾಗಿದ್ದ ಈ ಭವನದ ನಿರ್ಮಾಣಕ್ಕೆ ಜಾಗದ ಸಮಸ್ಯೆ ಎದುರಾಗಿತ್ತು. ಆಗ ಕ್ಷೇತ್ರದ ಶಾಸಕರಾಗಿದ್ದ ದಿ.ಉಮೇಶ ಕತ್ತಿ ಕಾಮಗಾರಿಗೆ ಇರುವ ಎಲ್ಲ ತೊಡುಕುಗಳನ್ನು ನಿವಾರಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ₹4 ಕೋಟಿ ಅನುದಾನ ಬಳಸಿಕೊಂಡು ಹಂತ -ಹಂತವಾಗಿ ನಡೆದ ಭವನದ ಕಾಮಗಾರಿ ಈಗ ಪೂರ್ಣಗೊಂಡಿದೆ. ರಾಷ್ಟ್ರ, ರಾಜ್ಯ, ವಿಭಾಗೀಯ ಮತ್ತು ಸ್ಥಳೀಯಮಟ್ಟದ ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ಸಂಘಟಕರಿಗೆ ಸುಸಜ್ಜಿತ ಭವನ ಸಿಕ್ಕಂತಾಗಿದೆ.