ಮುಂಗಾರು ಮಳೆ ಕರ್ನಾಟಕ ರಾಜ್ಯದಲ್ಲಿ ಅಲರ್ಟ್ ಆಗಿದ್ದು, ಮಲೆನಾಡು ಭಾಗ ಸೇರಿದಂತೆ ಪ್ರಮುಖ ನದಿಗಳು ಹುಟ್ಟುವ ಪ್ರದೇಶದಲ್ಲಿ ಭಾರಿ ಮಳೆ ಬೀಳುತ್ತಿದೆ. ಹೀಗಾಗಿ ಕರ್ನಾಟಕದ ನದಿಗಳ ನೀರಿನ ಪ್ರಮಾಣವೂ ಭಾರಿ ಏರಿಕೆ ಕಂಡಿದ್ದು, ತುಂಬಿ ತುಳುಕುತ್ತಿವೆ. ಈ ಮೂಲಕ ಕರ್ನಾಟಕದಲ್ಲಿ ನದಿಗಳಿಗೆ ಅಡ್ಡಲಾಗಿ ಕಟ್ಟಿರುವ ಡ್ಯಾಂ & ಚೆಕ್ ಡ್ಯಾಂಗೆ ಭರ್ಜರಿ ನೀರು ಹರಿದು ಬರುತ್ತಿದ್ದು, ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೆಆರ್‌ಎಸ್ ಡ್ಯಾಂ ಇನ್ನೇನು ಸಂಪೂರ್ಣ ತುಂಬುವ ಹಂತಕ್ಕೆ ಬರುತ್ತಿದೆ!
ಮುಂಗಾರು ಮಳೆ ಕರ್ನಾಟಕ ರಾಜ್ಯದಲ್ಲಿ ಅತಿಬೇಗ ಆರಂಭವಾದ್ರೂ ಒಂದಷ್ಟು ದಿನ ಸೈಲೆಂಟ್ ಆಗಿತ್ತು. ಹೀಗಿದ್ದಾಗ ಮುಂಗಾರು ಮಳೆ 2023 ರಲ್ಲಿ ಕೈಕೊಟ್ಟಂತೆ 2024 ರಲ್ಲೂ ಕೈಕೊಡಲಿದೆ ಎಂಬ ಭಯ ಆವರಿಸಿತ್ತು. ಆದರೆ ಕಳೆದ 1 ವಾರದಿಂದ ಮತ್ತೊಮ್ಮೆ ವೇಗ ಪಡೆದುಕೊಂಡಿದೆ ಮುಂಗಾರು. ಅದರಲ್ಲೂ ಕೊಡಗು, ಚಿಕ್ಕಮಗಳೂರು ಸೇರಿ ಶಿವಮೊಗ್ಗ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಬೀಳುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಈ ಮಳೆ ಅಬ್ಬರ ಜೋರಾಗಿದೆ. ಹೀಗಾಗಿ, ಕರ್ನಾಟಕದ ನದಿಗಳಿಗೆ ಭಾರಿ ಪ್ರಮಾಣದ ನೀರು ಬರ್ತಿದೆ. ಕಾವೇರಿ ನದಿಯ ತವರು ಕೊಡಗು ಜಿಲ್ಲೆಯಲ್ಲಿ ಮಳೆ ಆರ್ಭಟಕ್ಕೆ ಕೆಆರ್‌ಎಸ್ ಜಲಾಶಯಕ್ಕೆ ನೀರು ಉಕ್ಕಿ ಉಕ್ಕಿ ಹರಿದು ಬರುತ್ತಿದೆ.
ಕೆಆರ್‌ಎಸ್ ಜಲಾಶಯದ ಮಟ್ಟ ಎಷ್ಟು?
ಬೆಂಗಳೂರು ಸೇರಿದಂತೆ ಹಳೇ ಮೈಸೂರು ಭಾಗದ ಜನರಿಗೆ ಹೃದಯದಂತೆ ಆಗಿರುವ ಕೆಆರ್‌ಎಸ್ ಡ್ಯಾಂ ಈಗ ಜೀವಕಳೆ ಪಡೆದುಕೊಂಡಿದೆ. ಸುಮಾರು 10,000 ಕ್ಯುಸೆಕ್‌ಗೂ ಹೆಚ್ಚು ನೀರನ್ನ ಕೆಆರ್‌ಎಸ್ ಡ್ಯಾಂ ಪಡೆಯುತ್ತಿದೆ. ಹೀಗಾಗಿ ಭಾರಿ ಪ್ರಮಾಣದ ನೀರು ಈಗ ಜಲಾಶಯವನ್ನ ಸೇರುತ್ತಿದೆ. ಇದರ ಪರಿಣಾಮ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ ಇದೀಗ 96 ಅಡಿ ಮುಟ್ಟಿ ಇನ್ನೇನು 100 ಅಡಿ ತಲುಪುವ ನಿರೀಕ್ಷೆ ಮೂಡಿಸಿದೆ. ಇದರ ಜೊತೆಗೆ ಇದೇ ರೀತಿ ಮಳೆಯ ಅಬ್ಬರ ಮುಂದುವರಿದರೆ ಮುಂದಿನ ಕೆಲವೇ ದಿನಗಳಲ್ಲಿ ಕೆಆರ್‌ಎಸ್ ಡ್ಯಾಂ ಪೂರ್ತಿ ತುಂಬಿ ತುಳುಕಲಿದೆ. ಕೆಆರ್‌ಎಸ್ ಡ್ಯಾಂನಲ್ಲಿ ಈಗ 20 ಟಿಎಂಸಿ ನೀರು ಇದ್ದು, ಗರಿಷ್ಠ 49.4 TMC ಅಡಿ ನೀರು ಸಂಗ್ರಹ ಮಾಡಬಹುದು.
ಎಲ್ಲೆಲ್ಲಿ ಮಳೆಯ ಅಬ್ಬರ?
ಮುಂಗಾರು ಮಳೆ ಕರ್ನಾಟಕದ ಮೂಲೆ ಮೂಲೆಯಲ್ಲೂ ಅಬ್ಬರಿಸುತ್ತಿದ್ದು ಕನ್ನಡ ನಾಡು ಈಗ ಸಂಪೂರ್ಣ ಹಸಿರು ಹಸಿರಾಗಿ ಕಂಗೊಳಿಸುತ್ತಿದೆ. ಅದ್ರಲ್ಲೂ ಬೆಟ್ಟ, ಪರ್ವತಗಳ ನಾಡು ಎಂದು ಗುರುತಿಸಿಕೊಂಡ ಕನ್ನಡ ನಾಡಿನ ಮಲೆನಾಡು ಭಾಗ ಪಶ್ಚಿಮ ಘಟ್ಟದಲ್ಲಿ ಸ್ವರ್ಗ ಈಗ ನಿರ್ಮಾಣ ಆಗಿದೆ. ಕರಾವಳಿ ಕರ್ನಾಟಕವು ಸೇರಿ ಮಲೆನಾಡು, ಉತ್ತರ ಕರ್ನಾಟಕ & ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆ ಬೀಳುತ್ತಿದೆ.
ಹೀಗಾಗಿ, ಕರಾವಳಿ ಕರ್ನಾಟಕ ಭಾಗದಲ್ಲಿ ಮುಂದಿನ 48 ಗಂಟೆ ಭರ್ಜರಿ ಮಳೆ ಆಗುವ ಎಚ್ಚರಿಕೆ ಸಂದೇಶ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆ ಕರಾವಳಿ ಭಾಗಗಳಲ್ಲಿ ಎಚ್ಚರಿಕೆ ವಹಿಸಲಾಗಿದೆ. ಈಗಾಗಲೇ ಕಳೆದ ಹಲವು ದಿನಗಳಿಂದಲೂ ಈ ಭಾಗದಲ್ಲಿ ಭಾರಿ ಮಳೆ ಆಗುತ್ತಿದೆ. ಹೀಗಿದ್ದಾಗ ಮತ್ತೆ ಮಳೆರಾಯ ಅಬ್ಬರಿಸುತ್ತಿದ್ದಾನೆ. ಹಾಗೇ ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿ ಮಳೆ ಆರ್ಭಟಿಸುವ ಮುನ್ಸೂಚನೆಯು ಸಿಗುತ್ತಿದೆ.
ಮುಳುಗಿ ಹೋಗುತ್ತಿವೆ ಸೇತುವೆಗಳು!
ಅಷ್ಟಕ್ಕೂ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವ ಪರಿಣಾಮ ಮತ್ತು ಮಹಾರಾಷ್ಟ್ರ ಜಲಾಶಯಗಳಿಂದ ಭಾರಿ ಪ್ರಮಾಣದ ನೀರನ್ನ ಹೊರಗೆ ಬಿಡುತ್ತಿರುವ ಕಾರಣ ಇದೀಗ ಕೃಷ್ಣ ನದಿ ನೀರಿನ ಪ್ರಮಾಣದಲ್ಲಿ ಭಾರಿ ಏರಿಕೆ ಕಂಡಿದ್ದು ಕರ್ನಾಟಕದ ಎರಡು ಸೇತುವೆ ಮುಳುಗಡೆ ಆಗಿವೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮಾಂಜರಿ & ಬಾವನ ಸೌದತ್ತಿಯಲ್ಲಿ ಎರಡು ಹಳೆಯ ಸೇತುವೆ ಮುಳುಗಡೆ ಆಗಿವೆ. ಈಗಾಗಲೇ ಕೃಷ್ಣ ನದಿ ನೀರಿನ ಒಳ ಹರಿವಿನಲ್ಲಿ ಭಾರಿ ಪ್ರಮಾಣದ ಹೆಚ್ಚಳವಾಗಿದ್ದು, ಬರದ ಬವಣೆಗೆ ಬೇಸತ್ತ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ ಮಹಾರಾಷ್ಟ್ರದ ಎಡವಟ್ಟು ಈಗ ಪ್ರವಾಹ ಸೃಷ್ಟಿಸುವ ಭಯವೂ ಕಾಡ್ತಾ ಇದೆ.