Breaking News

ಮೊಸಳೆಗಳಿವೆ ಎಚ್ಚರಿಕೆ!

Spread the love

ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಮನುಷ್ಯ ಮತ್ತು ಮೊಸಳೆಗಳ ಸಂಘರ್ಷ ಬೇಸಿಗೆಯಲ್ಲಿ ಅಧಿಕ. ಕೃಷ್ಣಾ ನದಿಯಲ್ಲಿ ನೀರು ಕಡಿಮೆ ಆದ ಕೂಡಲೇ ಆಹಾರ ಅರಸಿ ದಡಕ್ಕೆ ಬರುವ ಮೊಸಳೆಗಳನ್ನು ಅಲ್ಲಿಯ ಜನರು ಏನು ಮಾಡುತ್ತಾರೆ?

ನದಿಯಿಂದ ದಡಕ್ಕೆ ಮೊಸಳೆ ಬಂದಿದೆ ಎನ್ನುವ ಸುದ್ದಿ ಹರಡುತ್ತಿದ್ದಂತೆ ದೊಡ್ಡ ಗುಂಪೇ ಸೇರುತ್ತದೆ.

ಹೊರ ಬಂದ ಮೊಸಳೆಯನ್ನು ಭಯದಿಂದಾಗಿ ಕಲ್ಲು, ಬಡಿಗೆಗಳಿಂದ ಹೊಡೆದು ಇಲ್ಲವೆ ಟ್ರ್ಯಾಕ್ಟರ್‌ ಹಾಯಿಸಿ ಕೊಂದ ಉದಾಹರಣೆಗಳು ಇವೆ. ಆದರೆ, ಈಗ ಪರಿಸ್ಥಿತಿ ಸುಧಾರಿಸಿದೆ. ಮೊಸಳೆ ಕಾಣುತ್ತಿದ್ದಂತೆಯೇ ಅದನ್ನು ಹಗ್ಗದಿಂದ ಕಟ್ಟಿಹಾಕಿ ಅರಣ್ಯ ಇಲಾಖೆ ಇಲ್ಲವೇ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡುವಷ್ಟು ಜನ ಕಕ್ಕುಲತೆ ಬೆಳೆಸಿಕೊಂಡಿದ್ದಾರೆ.

ಇಂತಹ ಚಿತ್ರಣಗಳನ್ನು ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ಕೃಷ್ಣಾ ನದಿ ತೀರದಲ್ಲಿ ಬೇಸಿಗೆ ಸಂದರ್ಭದಲ್ಲಿ ಹೆಚ್ಚಾಗಿ ಕಾಣಬಹುದು. ನೆರೆಯೋ, ಬರವೋ; ಏನೇ ಬಂದರೂ ಮೊಸಳೆಗಳು ನದಿಯಿಂದ ಹೊರಬರುವುದು ಗ್ಯಾರಂಟಿ.

ಚಿಕ್ಕೋಡಿ ತಾಲ್ಲೂಕಿನ ಸದಲಗಾ ಬಳಿ ಈಚೆಗೆ ದೂದ್‌ಗಂಗಾ (ಕೃಷ್ಣೆಯ ಉಪನದಿ) ನದಿಗೆ ಸ್ನಾನಕ್ಕೆ ತೆರಳಿದ್ದ ರೈತನನ್ನು ಮೊಸಳೆಯು ಕಚ್ಚಿ ಸಾಯಿಸಿತು. ಇದೇ ಫೆಬ್ರುವರಿಯಿಂದ ಏಪ್ರಿಲ್‌ವರೆಗೆ ನಾಲ್ಕು ಮೊಸಳೆಗಳನ್ನು ಜನರೇ ಹಿಡಿದು ನದಿಗೆ ಬಿಟ್ಟಿದ್ದಾರೆ.

ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಉಗಮವಾಗುವ ಕೃಷ್ಣಾ ನದಿ ಚಿಕ್ಕೋಡಿ ಮೂಲಕ ಕರ್ನಾಟಕ ಪ್ರವೇಶಿಸುತ್ತದೆ. ನದಿ ಉಗಮ ಸ್ಥಳ ಘಟ್ಟ ಪ್ರದೇಶದಲ್ಲಿ ಮೊಸಳೆಗಳ ಸಂತಾನೋತ್ಪತ್ತಿ ಹೆಚ್ಚು. ಕೃಷ್ಣಾ ನದಿಗೆ ಪ್ರವಾಹ ಬಂದಾಗ ಮರಿಗಳು ಹರಿದುಬರುತ್ತವೆ. ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಕೃಷ್ಣೆಯ ಹರಿವು ಜಾಸ್ತಿ. ಮೊಸಳೆಗಳಿಗೆ ಸಮೃದ್ಧ ಆಹಾರ ದೊರೆಯುತ್ತದೆ. ಹೀಗಾಗಿ ಈ ಪ್ರದೇಶದಲ್ಲೇ ಮೊಸಳೆಗಳು ಹೆಚ್ಚು.

‘ಮಾನವನ ವಾಸಸ್ಥಳಕ್ಕೆ ಯಾವುದೇ ವನ್ಯಜೀವಿ ಲಗ್ಗೆ ಇಡಲು ಆಹಾರದ ಕೊರತೆಯೇ ಕಾರಣ. ಹೊಟ್ಟೆಪಾಡಿಗಾಗಿ ಮನುಷ್ಯ ಗುಳೆ ಹೋಗುವ ರೀತಿ ಇದು ಕೂಡ ಮೊಸಳೆಗಳ ಗುಳೆ’ ಎನ್ನುತ್ತಾರೆ ಗೋಕಾಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ನಾಯಕವಾಡಿ.

ಈ ಬಾರಿ ಬರಗಾಲದಿಂದಾಗಿ ನದಿಯಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಇಳಿದಿದೆ. ಜಲಚರಗಳು ಸತ್ತಿವೆ. ಮೊಸಳೆಗಳ ವಲಸೆ ದೊಡ್ಡ ಪ್ರಮಾಣದಲ್ಲಿ ನಡೆದಿದೆ.

ಮೊಸಳೆ- ಮಾನವ ಸಂಘರ್ಷ ಏಕೆ, ಹೇಗೆ?

ಕೃಷ್ಣಾ ನದಿ ಹರಿಯುವ ಮಹಾರಾಷ್ಟ್ರ ಹಾಗೂ ಕರ್ನಾಟಕದ ಉದ್ದಕ್ಕೂ ಕಬ್ಬನ್ನು ಹೆಚ್ಚಾಗಿ ಬೆಳೆಯುತ್ತಾರೆ. ಕಬ್ಬು ಬೆಳೆಗೆ ಅಪಾರ ಪ್ರಮಾಣದ ನೀರು ಬೇಕು. ಅದರಲ್ಲೂ ಬೇಸಿಗೆಯಲ್ಲಿ ನದಿ ನೀರನ್ನು ವಿಪರೀತ ಬಳಸಲಾಗುತ್ತದೆ. ಏತ ನೀರಾವರಿ ಮೂಲಕ ಕೆರೆಕಟ್ಟೆಗಳನ್ನು ತುಂಬಿಸಲಾಗುತ್ತದೆ. ಕಬ್ಬು ಬೆಳೆಗೆ ತಕ್ಕಂತೆ ಸಕ್ಕರೆ ಕಾರ್ಖಾನೆಗಳು ಸಂಖ್ಯೆಯೂ ಹೆಚ್ಚಿವೆ. ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾ ನದಿ ನೀರು ಅವಲಂಬಿಸಿದ 17 ಸಕ್ಕರೆ ಕಾರ್ಖಾನೆಗಳಿವೆ. ಹಿಂದಕ್ಕೆ ಸಾಗಿದರೆ ಮಹಾರಾಷ್ಟ್ರ, ಮುಂದಕ್ಕೆ ಸಾಗಿದರೆ ಬಾಗಲಕೋಟೆ ಜಿಲ್ಲೆಯಲ್ಲಿ ಕೂಡ ಸಕ್ಕರೆ ಕಾರ್ಖಾನೆಗಳು ಹೆಚ್ಚು. ಕಾರ್ಖಾನೆಗಳಿಗೆ ವರ್ಷವಿಡೀ ಅಪಾರ ಪ್ರಮಾಣದ ನೀರು ಬಳಸಲಾಗುತ್ತದೆ.

ಕಾರ್ಖಾನೆಗಳಿಂದ, ಕೃಷಿ ಭೂಮಿಯಿಂದ ಉತ್ಪತ್ತಿಯಾಗುವ ಕಲ್ಮಷ ನೇರವಾಗಿ ಕೃಷ್ಣೆಯ ಒಡಲು ಸೇರುತ್ತದೆ. ಜಲಚರಗಳ ಸಾವಿಗೆ ಇದು ಕೂಡ ಕಾರಣ. ನದಿತೀರದಲ್ಲಿ ಮರಳುಗಾರಿಕೆ ಕೂಡ ನಿರಂತರ ನಡೆದೇ ಇದೆ. ಈ ಎಲ್ಲ ಕಾರಣಗಳಿಂದ ಪ್ರತಿ ಬೇಸಿಗೆಯಲ್ಲಿ ನದಿ ನೀರಿನ ಪ್ರಮಾಣ ಕುಸಿಯುತ್ತದೆ. ಜಲಚರಗಳು ಸಾಯುತ್ತವೆ. ಮೊಸಳೆಗಳು ಹಸಿವಿನಿಂದ ಬಳಲುತ್ತವೆ.

ನದಿ ತೀರಕ್ಕೆ ತಾಗಿಕೊಂಡು ಸುಮಾರು 200 ಹಳ್ಳಿಗಳಿವೆ. ಊರು ವಿಸ್ತಾರವಾಗುತ್ತ, ನದಿ ಒಡಲು ಕಡಿಮೆಯಾಗುತ್ತಿದೆ. ಬೇಸಿಗೆಯಲ್ಲಿ ನೀರು ಕೆಳಗಿಳಿದ ತಕ್ಷಣ ನದಿ ಬಯಲಲ್ಲೇ ರೈತರು ಉಳುಮೆ ಮಾಡುತ್ತಾರೆ. ಇದನ್ನೇ ಜಲಚರಗಳ ಪ್ರದೇಶದ ಅತಿಕ್ರಮಣ ಎನ್ನುತ್ತಾರೆ ಪರಿಸರ ತಜ್ಞರು.

ಮೊಸಳೆ ನೀರೊಳಗಿದ್ದರೆ ಮೀನು, ಏಡಿ ಸೇರಿದಂತೆ ಜಲಚರಗಳನ್ನು ತಿನ್ನುತ್ತದೆ. ಹೊರಬಂದಾಗ ಆಡು, ಕುರಿ, ಹಸು, ಎತ್ತು, ಎಮ್ಮೆ, ನಾಯಿ, ಕುದುರೆ ಹೀಗೆ ಪ್ರಾಣಿಗಳನ್ನೂ ಬೇಟೆಯಾಡುತ್ತದೆ.


Spread the love

About Laxminews 24x7

Check Also

ನಿರ್ಮಲಾ ಸೀತಾರಾಮನ್‌ ಭೇಟಿ ಮಾಡಿದ ಸಿಎಂ

Spread the loveನಿರ್ಮಲಾ ಸೀತಾರಾಮನ್‌ ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ: ಅಲ್ಪಾವಧಿ ಕೃಷಿ ಸಾಲದ ಮಿತಿ ಹೆಚ್ಚಿಸುವಂತೆ ಮನವಿಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ