ಆಕೆಗೆ ಮದುವೆಯಾಗಿ ಆಗಷ್ಟೇ ಏಳು ತಿಂಗಳ ಗರ್ಭಿಣಿ ಈ ಸಂದರ್ಭದಲ್ಲಿ ಗಂಡ ಮೃತಪಡುತ್ತಾರೆ. ಇದಾದ ಬಳಿಕ ದಿಕ್ಕೇ ತೋಚದಾದ ಮಹಿಳೆ ಜೀವನವೇ ನಿಂತು ಹೋಯ್ತು ಅಂತಾ ಶಾಕ್ ಗೆ ಒಳಗಾಗಿ ಬಿಡ್ತಾಳೆ. ಆದ್ರೇ ಈ ಶಾಕ್ ನಿಂದ ಹೊರ ಬಂದು ಮೂರನೇ ಕ್ಲಾಸ್ ಪಾಸ್ ಆಗಿದ್ದ ಆಕೆ ಶುರು ಮಾಡಿದ್ದು ತಾನೇ ಕಲ್ತಿದ್ದ ಕಸುಬು. ಕೌದಿ ಹೊಲಿಯಲು ಆರಂಭಿಸಿದ ಆಕೆ ಇದೀಗ ವರ್ಷಕ್ಕೆ 50-60 ಲಕ್ಷ ರೂಪಾಯಿ ದುಡಿಯುವ ಹೆಣ್ಣು ಮಗಳು…
ಹೌದು ಕಷ್ಟಕಾಲದಲ್ಲಿ ಬದುಕಿನ ಬಂಡಿ ದೂಡಲು ನೆರವಾಗಲೆಂದು ಜಿಲ್ಲೆಯ ಹುಕ್ಕೇರಿ ತಾಲೂಕಿನ ಚಿಕ್ಕಾಲಗುಡ್ಡ ಹಳ್ಳಿಯಲ್ಲಿ ಮಹಿಳೆಯರು ಸಿದ್ಧಪಡಿಸಲು ಆರಂಭಿಸಿದ ‘ಕೌದಿ’ಗಳಿಗೆ ಭಾರತವಷ್ಟೇ ಅಲ್ಲ; ಈಗ ವಿದೇಶದಿಂದಲೂ ಬೇಡಿಕೆ ಬಂದಿದೆ. ಪ್ರಸಕ್ತ ವರ್ಷ 650 ಕೌದಿಗಳು ಮಾರಾಟವಾಗಿವೆ.
ಈ ಪೈಕಿ 150 ಕೌದಿಗಳು ಅಮೆರಿಕನ್ನರ ಮನೆ ಸೇರಿವೆ. ರಾಜ್ಯದ ವಿವಿಧೆಡೆ ಸೀರೆ, ಹರಿದ ಅಂಗಿ, ಪ್ಯಾಂಟ್, ಧೋತರ ಹೀಗೆ… ವಿವಿಧ ಹಳೆ ಬಟ್ಟೆಗಳನ್ನು ಬಳಸಿ, ಕೌದಿ ತಯಾರಿಸಲಾಗುತ್ತಿದೆ. ಆದರೆ, ಚಿಕ್ಕಾಲಗುಡ್ಡದಲ್ಲಿ ರಾಜಸ್ಥಾನದ ಜೈಪುರ, ಬೆಳಗಾವಿ ತಾಲೂಕಿನ ಹುದಲಿ ಮತ್ತಿತರ ಖಾದಿ ಉತ್ಪಾದನಾ ಸಂಘಗಗಳಿಂದ ಹೊಸ ಕಾಟನ್ ಬಟ್ಟೆ ಖರೀದಿಸಿ, ಕೌದಿ ತಯಾರಿಸಲಾಗುತ್ತಿದೆ. ಆಧುನಿಕ ಶೈಲಿಗೆ ತಕ್ಕಂತೆ, ಅವುಗಳ ಮೇಲೆ ವಿವಿಧ ಹೂವುಗಳು, ತೇರು, ಪಗಡೆ ಮನೆ, ನಕ್ಷತ್ರ ಮತ್ತಿತರ ವಿನ್ಯಾಸ ತೆಗೆಯಲಾಗುತ್ತಿದೆ ಮಾತಾ ಸಾವಿತ್ರಿಬಾಯಿ ಸ್ವಸಹಾಯ ಸಂಘದ ಅಧ್ಯಕ್ಷೆ ಶಾರವ್ವ ಧಾರೋಜಿ ಆರಂಭದಲ್ಲಿ ಬ್ಯಾಂಕ್‌ನಲ್ಲಿ ₹5 ಲಕ್ಷ ಸಾಲ ಪಡೆದು, 10 ವರ್ಷಗಳ ಹಿಂದೆ ಕೌದಿ ತಯಾರಿಕೆ ಆರಂಭಿಸಿದ್ದರು. ತಾವು ತಯಾರಿಸಿದ ಉತ್ಪನ್ನಗಳನ್ನು ಸ್ಥಳೀಯ ಮಟ್ಟದಲ್ಲೇ ಮಾರುತ್ತಿದ್ದರು. ಆದರೆ, ಇನ್ಫೊಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ಈ ಕೌದಿಗಳಿಗೆ ಎಲ್ಲಿಲ್ಲದ ಬೇಡಿಕೆ ತಂದುಕೊಟ್ಟರು. ಅಲ್ಲಿಂದ ಕೌದಿಗೆ ವಿದೇಶದಲ್ಲಿಯೂ ಬಂತೂ ಎಲ್ಲಿಲ್ಲದ ಬೇಡಿಕೆ. ಇದರಿಂದ ಶಾರವ್ವನ ಬದುಕು ಬದಲಾಯಿತು…