ಕಿತ್ತೂರು: ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಮಹಿಳೆ ವೀರರಾಣಿ ಚನ್ನಮ್ಮಳ ಕೋಟೆ ಅಭಿವೃದ್ಧಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ.
ಕೋಟೆ ಪ್ರವೇಶಿಸುತ್ತಿದ್ದಂತೆ ಸಹಿಸಲಾಗದಷ್ಟು ಕೊಳೆತು ನಾರುವ ಕಸದ ವಾಸನೆ ಮೂಗಿಗೆ ಬಡಿಯುತ್ತದೆ.
ಸಾರ್ವಜನಿಕರು, ಅಂಗಡಿಕಾರರು ತಾಜ್ಯ ವಸ್ತುಗಳನ್ನು ಕೋಟೆ ಮುಂಭಾಗ ಎಸೆಯುತ್ತಿರುವ ಪರಿಣಾಮ ಗಬ್ಬೆದ್ದು ನಾರುತ್ತಿದೆ. ಇತಿಹಾಸ
ಸಾರುವ ಕಂದಕಗಳು ಕಸ ಕಡ್ಡಿ, ಸಾರಾಯಿ ಬಾಟಲಿಗಳಿಂದ ತುಂಬಿ ತುಳುಕುತ್ತಿವೆ.
ನನೆಗುದಿಗೆ ಬಿದ್ದ ಧ್ವನಿ-ಬೆಳಕು: 2011ರಲ್ಲಿ ಕೋಟೆಯ ಆವರಣದಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ಧ್ವನಿ ಮತ್ತು ಬೆಳಕಿನ ಶೋ ವ್ಯವಸ್ಥೆ ಮಾಡಲಾಗಿತ್ತು. ನಂತರದ ದಿನಗಳಲ್ಲಿ ಶೋ ಸ್ಥಗಿತಗೊಂಡಿತು. ಪುನಃ 2014ರಲ್ಲಿ ಮರು ಉದ್ಘಾಟನೆಗೊಂಡರೂ
ಇದು ಸಹಿತ ಆಗಿನ ಕಿತ್ತೂರು ಉತ್ಸವಕ್ಕೆ ಸೀಮಿತವಾಯಿತು.
ಸಮಗ್ರ ಅಭಿವೃದ್ಧಿ ಅಗತ್ಯ: ಚನ್ನಮ್ಮನ ಕಿತ್ತೂರು ಕೇವಲ ಉತ್ಸವಕ್ಕೆ ಸೀಮಿತವಾಗದೆ ರಾಷ್ಟ್ರ- ಅಂತಾರಾಷ್ಟ್ರಮಟ್ಟದ ಪ್ರವಾಸಿಗರನ್ನು ಸೆಳೆಯುವ ಪ್ರವಾಸಿ ತಾಣವಾಗಬೇಕು. ಕಿತ್ತೂರು ಉತ್ಸವ ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ವ್ಯಾಪಿಸಬೇಕು. ಕಿತ್ತೂರು ಪಟ್ಟಣವನ್ನು ಸ್ಮಾರ್ಟ್‌ಸಿಟಿ ಮಾದರಿ ಪಟ್ಟಣವನ್ನಾಗಿ ರೂಪಿಸಬೇಕು. ಕಿತ್ತೂರಲ್ಲಿ ರಾಣಿ ಚನ್ನಮ್ಮನ ಸಂಶೋಧನಾ ಕೇಂದ್ರ ತೆರೆಯಬೇಕು.