Breaking News

ಕೃಷಿಕನ ಕೈ ಹಿಡಿದ ‘ನಾರಿ ಸುವರ್ಣ’

Spread the love

ಬೆಳಗಾವಿ: ‘ಐದು ವರ್ಷಗಳ ಹಿಂದೆ ₹2 ಲಕ್ಷ ಬಂಡವಾಳ ಹೂಡಿಕೆ ಮಾಡಿ, ಕುರಿ ಸಾಕಾಣಿಕೆಯತ್ತ ಹೊರಳಿದೆ. ಆರಂಭದಲ್ಲಿ ಐದು ಕುರಿ ಮತ್ತು ಏಳು ಮರಿಗಳಷ್ಟೇ ಇದ್ದವು. ಈಗ 120 ಕುರಿಗಳಿದ್ದು, ನಿರೀಕ್ಷೆಗಿಂತ ಉತ್ತಮ ಆದಾಯ ಬರುತ್ತಿದೆ. ಕೃಷಿಯೊಂದಿಗೆ ಈ ಉಪಕಸುಬು ನನ್ನ ಕೈಹಿಡಿದು ಮುನ್ನಡೆಸುತ್ತಿದೆ’

ಇದು ತಾಲ್ಲೂಕಿನ ಕಮಕಾರಟ್ಟಿ ಬಳಿಯ ರೈತ ಮಹೇಶ ಅರ್ಜುನಶಾ ಮಿರಜಕರ ಮಾತು.

6 ಎಕರೆ ಕೃಷಿಭೂಮಿ ಹೊಂದಿರುವ ಅವರು, ಸೋಯಾಬೀನ್‌, ಜೋಳ ಬೆಳೆಯುತ್ತಿದ್ದಾರೆ. ಇದರೊಂದಿಗೆ ಕುರಿ ಸಾಕಾಣಿಕೆಯನ್ನೂ ಆರಂಭಿಸಿದ್ದು, ಇದಕ್ಕಾಗಿ 40×25 ಅಡಿ ಅಳತೆಯಲ್ಲಿ ಪ್ರತ್ಯೇಕವಾದ ಶೆಡ್‌ ನಿರ್ಮಿಸಿದ್ದಾರೆ.

‘ಕನಿಷ್ಠ 20 ವರ್ಷ ಸಂಶೋಧನೆ ಕೈಗೊಂಡು ‘ನಾರಿ ಸುವರ್ಣ’ ತಳಿಯನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಹಾಗಾಗಿ ನಾನು ಇದೇ ತಳಿಯ ಕುರಿ ಸಾಕಿದ್ದೇನೆ. ಇವು ಗಟ್ಟಿಮುಟ್ಟು. ಬೇರೆ ತಳಿಯ ಕುರಿಗಳಿಗೆ ಹೋಲಿಸಿದರೆ, ಕಾಯಿಲೆಗೀಡಾಗುವ ಸಾಧ್ಯತೆಯೂ ಕಡಿಮೆ. ಎರಡರಿಂದ ನಾಲ್ಕು ಮರಿಗಳಿಗೆ ಏಕಕಾಲಕ್ಕೆ ಜನ್ಮ ನೀಡುತ್ತವೆ. ಯಾವುದೇ ಹವಾಗುಣಕ್ಕೂ ಹೊಂದಿಕೊಳ್ಳುವ ಗುಣಲಕ್ಷಣ ಈ ಕುರಿಗಳಿಗಿದೆ’ ಎಂದು ಮಹೇಶ ಹೇಳಿದರು.

‘ಇಂಡಿಯನ್‌ ಕೌನ್ಸಿಲ್‌ ಆಫ್‌ ಅಗ್ರಿಕಲ್ಚರಲ್‌ ರಿಸರ್ಚ್‌ ಹಾಗೂ ಸೆಂಟ್ರಲ್‌ ಶೀಪ್‌ ವೂಲ್ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ಈ ತಳಿಯ ಸಂವರ್ಧನೆ ಮತ್ತು ಅಭಿವೃದ್ಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದೇನೆ. ರಾಜ್ಯ ಹಾಗೂ ಹೊರರಾಜ್ಯಗಳಿಂದ ಬರುವ ರೈತರಿಗೆ ಮಾರ್ಗದರ್ಶನ ನೀಡುತ್ತಿದ್ದೇನೆ’ ಎಂದರು.

‘ನಮ್ಮಲ್ಲೇ ‘ಆವಿಷಾನ್‌’ ಎಂಬ ಹೊಸ ತಳಿ ಅಭಿವೃದ್ಧಿಪಡಿಸುತ್ತಿದ್ದೇವೆ. ಕುರಿಗಳಲ್ಲಿ ಯಾವುದೇ ಹೊಸ ತಳಿ ಬಂದರೂ ಪ್ರಯೋಗಕ್ಕಿಳಿಯುತ್ತಿದ್ದೇವೆ. ಕುರಿಗಳ ಆಹಾರಕ್ಕಾಗಿ ಸಮೃದ್ಧವಾದ ಮೇವು ಬೆಳೆಯುತ್ತಿದ್ದೇವೆ. ಜತೆಗೆ ತೊಗರಿ ಹೊಟ್ಟು, ಹೆಸರು ಹೊಟ್ಟು ಮತ್ತಿತರ ಆಹಾರ ನೀಡುತ್ತಿದ್ದೇವೆ’ ಎನ್ನುವ ಅವರು, ಇಬ್ಬರು ಕಾರ್ಮಿಕರ ನೆರವಿನೊಂದಿಗೆ ಅವುಗಳನ್ನು ಸಾಕುತ್ತಿದ್ದಾರೆ. ವಿವಿಧೆಡೆಯ ರೈತರು ಇಲ್ಲಿಗೆ ಬಂದು ಕುರಿಗಳನ್ನು ಖರೀದಿಸುತ್ತಾರೆ.

‘ಕೃಷಿಯಲ್ಲಿ ನಷ್ಟದ ಮಾತೇ ಇಲ್ಲ. ಆದರೆ, ರೈತರು ಯೋಜನಾಬದ್ಧವಾಗಿ ಈ ಕಾಯಕ ಮಾಡಬೇಕು. ಕೃಷಿಯೊಂದಿಗೆ ಉಪಕಸುಬುಗಳತ್ತ ಆಕರ್ಷಿತರಾಗಬೇಕು. ಜಾಗದ ಲಭ್ಯತೆ ಆಧರಿಸಿ ಶೆಡ್‌ ನಿರ್ಮಿಸಿಕೊಂಡು, ನಾರಿ ಸುವರ್ಣ ತಳಿಯ ಕುರಿಗಳನ್ನು ಸಾಕಿದರೆ ಈಗಿರುವುದಕ್ಕಿಂತ ಮೂರ್ನಾಲ್ಕು ಪಟ್ಟು ಆದಾಯ ಹೆಚ್ಚಿಸಿಕೊಳ್ಳಬಹುದು’ ಎಂದು ಮಹೇಶ ಸಲಹೆ ನೀಡಿದರು.

‘ಮುಂದಿನ ದಿನಗಳಲ್ಲಿ 50×40 ಅಡಿ ಅಳತೆಯಲ್ಲಿ ಮತ್ತೊಂದು ಶೆಡ್‌ ನಿರ್ಮಿಸಿ, ಹೆಚ್ಚಿನ ಕುರಿಗಳನ್ನು ಸಾಕಲು ಯೋಜಿಸಿದ್ದೇನೆ’ ಎನ್ನುತ್ತಾರೆ ಅವರು.


Spread the love

About Laxminews 24x7

Check Also

ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ ಬಿಜೆಪಿ ಸೆಡ್ಡು!

Spread the love ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ