ಹುಬ್ಬಳ್ಳಿ: ಕೊರೊನಾ ಮಹಾಮಾರಿ ಅದೆಷ್ಟೋ ಜನರ ಉದ್ಯೋಗ ಕಸಿದುಕೊಂಡು ಮೂಲೆ ಸೇರುವಂತೆ ಮಾಡಿದೆ. ಅಲ್ಲದೇ ಅನೇಕರು ಬೇರೆ ಉದ್ಯೋಗ ಮಾಡಲಾಗದೆ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಾಲೇಜಿಗೆ ಹೋಗಿ ವ್ಯಾಸಂಗ ಮಾಡಬೇಕಿದ್ದ ವಿದ್ಯಾರ್ಥಿಗಳಿಬ್ಬರು ಬಿರಿಯಾನಿ ಮಾರುವ ಮೂಲಕ ಕುಟುಂಬಕ್ಕೆ ಆಸರೆಯಾಗಿ ನಿಂತಿದ್ದಾರೆ.
ಚೇತನ ಹಳ್ಳಿಕೇರಿ ತಂದೆ ಗ್ಯಾರೇಜ್ ನಡೆಸುತ್ತಿದ್ದರು. ಆದರೆ ಕೊರೊನಾ ಕಾರಣದಿಂದ ಗ್ರಾಹಕರು ಕಡಿಮೆಯಾಗಿ ಗ್ಯಾರೇಜ್ ಮುಚ್ಚಿದ್ದಾರೆ. ಹೀಗಾಗಿ ಕುಟುಂಬ ನಿರ್ವಹಣೆಗಾಗಿ ಚೇತನ ತನ್ನ ಸ್ನೇಹಿತ ಸೋಯೆಬ್ ಶೇಖ್ ಜೊತೆ ಸೇರಿ ಹೋಂ ಮೆಡ್ ಬಿರಿಯಾನಿ ಆರಂಭಿಸಿದ್ದಾರೆ.
ತಮ್ಮ ಹತ್ತಿರವಿದ್ದ ಕಾರನ್ನೇ ಬಳಸಿಕೊಂಡು ಮನೆಯಲ್ಲಿಯೇ ಬಿರಿಯಾನಿ ಪ್ಯಾಕೇಟ್‍ಗಳನ್ನು ಸಿದ್ಧಪಡಿಸಿಕೊಂಡು ಬಂದು ದೇಶಪಾಂಡೆ ನಗರ ಸೇರಿದಂತೆ ಹಲವು ಕಡೆ ವ್ಯಾಪಾರ ಮಾಡುತ್ತಾರೆ. ಎಗ್ ಬಿರಿಯಾನಿ 49 ರೂಪಾಯಿ, ಚಿಕನ್ ಬಿರಿಯಾನಿ 59 ರೂಪಾಯಿಯಂತೆ ಮಾರಾಟ ಮಾಡುತ್ತಾರೆ. ಪ್ರತಿದಿನ 12 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೂ 20ಕ್ಕೂ ಹೆಚ್ಚು ಪ್ಯಾಕೇಟ್‍ಗಳನ್ನು ಮಾರಾಟ ಮಾಡುತ್ತಿದ್ದಾರೆ. ಎಲ್ಲಾ ಖರ್ಚು ಕಳೆದು ಪ್ರತಿ ದಿನ ಐದಾರು ನೂರು ಸಂಪಾದನೆ ಮಾಡುತ್ತಿದ್ದಾರೆ.
ಚೇತನ ಆರ್.ಎನ್.ಶೆಟ್ಟಿ ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ಪರೀಕ್ಷೆ ಬರೆದಿದ್ದಾರೆ. ಇನ್ನೂ ಸೋಯೆಬ್ ಅನಿವಾರ್ಯ ಕಾರಣಗಳಿಂದ ವಿದ್ಯಾಭ್ಯಾಸ ನಿಲ್ಲಿಸಿದ್ದಾನೆ. ಕೊರೊನಾ ಸಂಕಷ್ಟ ಕಾಲದಲ್ಲಿ ಈ ಸ್ನೇಹಿತರು ಸ್ವ ಉದ್ಯೋಗ ಸೃಷ್ಟಿಸಿಕೊಳ್ಳುವ ಮೂಲಕ ಕುಟುಂಬ ನಿರ್ವಹಣೆ ಮಾಡಿ ಇತರರಿಗೂ ಮಾದರಿಯಾಗಿದ್ದಾರೆ.
https://youtu.be/eP5kqN8ixFA