ಬೆಂಗಳೂರು: ಹುಲಿ ಉಗುರಿನ ಡಾಲರ್ ಧರಿಸಿದ ಆರೋಪದ ಮೇಲೆ ಬಂಧಿತರಾಗಿದ್ದ ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿ ಹಳ್ಳಿಕಾರ್ ಖ್ಯಾತಿಯ ವರ್ತೂರು ಸಂತೋಷ್ ಮತ್ತೆ ಬಿಗ್ ಬಾಸ್ ಮನೆಗೆ ರೀ ಎಂಟ್ರಿ ಕೊಟ್ಟು ಸ್ಪರ್ಧಾರ್ತಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ.
ಹುಲಿ ಉಗುರಿನ ಡಾಲರ್ ಧಾರಣೆ ಪ್ರಕರಣದಲ್ಲಿ ಅ.22ರಂದು ಬಿಗ್ ಬಾಸ್ ಮನೆಯಿಂದಲೇ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಇದರಿಂದ ಅನಿರೀಕ್ಷಿತವಾಗಿ ಮನೆಯಿಂದ ಎಕ್ಸಿಟ್ ಆಗಿದ್ದ ಅವರು ಮತ್ತೆ ಬಿಗ್ ಬಾಸ್ ಮನೆ ಸೇರಿಕೊಂಡಿದ್ದಾರೆ.
ಅರಣ್ಯಾಧಿಕಾರಿಗಳಿಂದ ಬಂಧನ: ಸಂತೋಷ್ ಹುಲಿಯ ಉಗುರಿನ ಡಾಲರ್ಅನ್ನು ಧರಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ ಎಂದು ಅವರ ವಿರುದ್ಧ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವರ್ತೂರು ಸಂತೋಷ್ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ, ಅವರ ಬಳಿಯಿದ್ದ ಡಾಲರ್ ಜಪ್ತಿ ಮಾಡಿಕೊಂಡಿದ್ದರು.
ಷರತ್ತುಬದ್ದ ಜಾಮೀನು: ಸಂತೋಷ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬಂಧನ ಆಗುತ್ತಿದ್ದಂತೆ ಸಂತೋಷ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಣೆ ನಡೆಸಿದ 2ನೇ ಎಸಿಜೆಎಂ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ನಾಲ್ಕು ಸಾವಿರ ನಗದು ಭದ್ರತೆ ಹಾಗೂ ಒಬ್ಬರ ಶ್ಯೂರಿಟಿ ಒದಗಿಸುವಂತೆ ತಿಳಿಸಿ ಜಾಮೀನು ನೀಡಿತ್ತು. ಸಂತೋಷ್ ಪರ ವಕೀಲ ನಟರಾಜ್ ಹಾಗೂ ಸರ್ಕಾರಿ ಅಭಿಯೋಜಕರು ನ್ಯಾಯಾಲಯದ ಮುಂದೆ ವಾದ ಮಂಡಿಸಿದ್ದರು. ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶರು ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ್ದರು