Breaking News

ಬೆಂಗಳೂರಿನಲ್ಲಿ ಕಮಾಂಡ್ ಸೆಂಟರ್ ನಿರ್ಮಾಣ: ಗೃಹ ಸಚಿವ ಜಿ ಪರಮೇಶ್ವರ್

Spread the love

ಮಂಗಳೂರು: ಬೆಂಗಳೂರಿನಲ್ಲಿ ಕಮಾಂಡ್ ಸೆಂಟರ್​ನ್ನು ನಿರ್ಮಿಸಲಾಗುತ್ತಿದೆ. ಈ ಮೂಲಕ ರಾಜ್ಯದ ಎಲ್ಲಾ ಠಾಣೆಗಳಲ್ಲಿ ನಡೆಯುವ ಕೆಲಸವನ್ನು ಕಮಾಂಡ್ ಸೆಂಟರ್ ಮೂಲಕ ವೀಕ್ಷಿಸುವ ಕಾರ್ಯ ಆಗಲಿದೆ ಎಂದು ಗೃಹಸಚಿವ ಡಾ‌.

ಜಿ ಪರಮೇಶ್ವರ್ ಹೇಳಿದರು.

ನಗರದ ವಾಮಂಜೂರಿನಲ್ಲಿ‌ ಮಂಗಳೂರು ಗ್ರಾಮಾಂತರ ಠಾಣೆಯನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, “ಪೊಲೀಸ್ ಠಾಣೆಗೆ ಬಂದು ಹೋದವರು ಯಾರು, ಪ್ರತೀ ದೂರುಗಳು ಎಫ್‌ಐಆರ್ ಆಗಿದೆಯೇ?, ಇಲ್ಲವೋ?, ದೂರು ನೀಡಲು ಬಂದವರಿಗೆ ಸರಿಯಾದ ಸ್ಪಂದನೆ ದೊರಕಿದೆಯೇ ಎಂಬಿತ್ಯಾದಿ ವಿಚಾರಗಳನ್ನು ಕಮಾಂಡ್ ಸೆಂಟರ್​ನಿಂದ ಸೂಕ್ಷ್ಮವಾಗಿ ಪರಿಶೀಲಿಸುವ ಕಾರ್ಯವು ಆಗಲಿದೆ. ಒಂದು ಠಾಣೆಯಲ್ಲಿ ಪ್ರತೀ ಕ್ಷಣದಲ್ಲಿ ಏನು ಆಗುತ್ತಿದೆ ಎಂಬುದನ್ನು ನೋಡುವಂತಹ ರೀತಿಯಲ್ಲಿ ಈ ಕಮಾಂಡ್ ಸೆಂಟರ್ ನಿರ್ಮಾಣವಾಗಲಿದೆ” ಎಂದು ವಿವರಿಸಿದರು.

ಈ ಬಾರಿ ಗೃಹ ಸಚಿವನಾದ ಬಳಿಕ ಪೊಲೀಸ್ ಕಮಿಷನರ್, ಎಸ್ಪಿ, ಐಜಿಯವರಿಗೆ ರಾಜ್ಯದಲ್ಲಿ ಶಾಂತಿಯನ್ನು ಕಾಪಾಡುವ ಟಾರ್ಗೆಟ್ ನೀಡಿದ್ದೇನೆ. ಶಾಂತಿ ಕಾಪಾಡಲು ವಿಫಲವಾದಲ್ಲಿ ತಮ್ಮನ್ನೇ ಟಾರ್ಗೆಟ್ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದೇನೆ. ಅದಕ್ಕಾಗಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಪೊಲೀಸರನ್ನು ಸಂವೇದನಾಶೀಲರನ್ನಾಗಿ ಮಾಡಬೇಕು. ನ್ಯಾಯಯುತರಾಗಿ ಕೆಲಸ ಮಾಡಲು ಸೂಚಿಸಬೇಕು‌. ಠಾಣೆಗೆ ಬರುವ ಪ್ರತೀ ದೂರುದಾರರನ್ನು ಸಂಯಮದಿಂದ ಮಾತನಾಡಿಸಿ ದೂರು ಪಡೆದು ಅವರನ್ನು ಸಮಾಧಾನದಿಂದ ಠಾಣೆಯಿಂದ ಕಳುಹಿಸಬೇಕು. ಈ ಮೂಲಕ ಜನಸ್ನೇಹಿ ವಾತಾವರಣ ಸೃಷ್ಟಿ ಮಾಡಬೇಕು ಎಂದು ನಾನು ಅಧಿಕಾರಿಗಳಿಗೆ ಸೂಚಿಸಿದ್ದೇನೆ‌. ಅದನ್ನು ಇಲಾಖೆಯಲ್ಲಿ ಮಾಡುತ್ತಿದ್ದಾರೆ ಎಂದರು.

ಗೃಹ ಸಚಿವನಾಗಿ ತಾನು ಶಾಂತಿಯನ್ನು ಬಯಸುತ್ತೇನೆ. ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ಅಪರಾಧಗಳ ಸಂಖ್ಯೆ ಇಳಿಮುಖವಾಗಿದೆ‌. ಆದರೆ ವೈಟ್ ಕಾಲರ್ ಸೈಬರ್ ಕ್ರೈಂಗಳ ಸಂಖ್ಯೆ ಹೆಚ್ಚಳವಾಗಿದೆ. ದಿನಕ್ಕೆ ಸಾವಿರಾರು ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗುತ್ತಿವೆ. ಅದಕ್ಕಾಗಿ ರಾಜ್ಯದ ಎಲ್ಲಾ ಠಾಣೆಗಳಲ್ಲೂ ಸೈಬರ್ ಕ್ರೈಂ ಪ್ರಕರಣಗಳನ್ನು ದಾಖಲಿಸಲು ಅವಕಾಶ ನೀಡಿದ್ದೇವೆ‌ ಎಂದು ತಿಳಿಸಿದರು.

ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಇಡೀ ರಾಷ್ಟ್ರದಲ್ಲೇ ಉತ್ತಮ ಹಾಗೂ ಶಿಸ್ತಿನಿಂದ ಕೆಲಸ ಮಾಡುವ ಪೊಲೀಸರಿದ್ದಾರೆ. ಸಣ್ಣಪುಟ್ಟ ವ್ಯತ್ಯಾಸ ನ್ಯೂನತೆಗಳಿದ್ದರೂ ನಮ್ಮ ಪೊಲೀಸ್ ಇಲಾಖೆಯ ಬಗ್ಗೆ ಹೆಮ್ಮೆಯಿದೆ. ಆದ್ದರಿಂದ ಪೊಲೀಸರಿಗೆ ಪ್ರಾಮಾಣಿಕವಾಗಿ, ಶಿಸ್ತಿನಿಂದ ಕೆಲಸ ಮಾಡಲು ಉತ್ತಮ ವಾತಾವರಣವನ್ನು ಸೃಷ್ಟಿ ಮಾಡಿದ್ದೇವೆ. ರಾಜ್ಯದ ಪೊಲೀಸರು ಹೆಚ್ಚಿನ ಪ್ರಕರಣಗಳನ್ನು ಕೆಲವೇ ಗಂಟೆಗಳಲ್ಲಿ ಅಥವಾ 24 ಗಂಟೆಗಳಲ್ಲಿ ಭೇದಿಸಿ ಅಪರಾಧಿಗಳನ್ನು ಕಂಬಿ ಹಿಂದೆ ಕಳಿಸಿರುವ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣಮುಂದಿದೆ. ಇದಕ್ಕಾಗಿ ನಾನು ಪೊಲೀಸ್ ಇಲಾಖೆಯನ್ನು ಪ್ರಶಂಸಿಸುತ್ತೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯದ ಪೊಲೀಸ್ ಸ್ಟೇಷನ್​ಗಳು, ಪೊಲೀಸರ ವಸತಿ ನಿಲಯಗಳು ಶಿಥಿಲಾವಸ್ಥೆಗೆ ತಲುಪಿದ್ದು, ಇವುಗಳ ನಿರ್ಮಾಣ ಕಾರ್ಯ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಈ ಬಗ್ಗೆ ನಾನು ಪರಿಶೀಲನೆ ನಡೆಸಿದಾಗ ಅಲ್ಲಿನ ಸ್ಥಿತಿಗತಿಗಳ ಅರಿವಾಯಿತು. ಆದ್ದರಿಂದ ಸಿಎಂ ಸಿದ್ದರಾಮಯ್ಯರಲ್ಲಿ ಮಾತನಾಡಿದಾಗ ಅವರು ಕ್ರಮಕೈಗೊಳ್ಳಲು ಸೂಚನೆ ನೀಡಿದರು. ಪೊಲೀಸ್ ಗೃಹ ಎಂಬ ಯೋಜನೆಯನ್ನು ಜಾರಿಗೆ ತಂದು 20 ಸಾವಿರ ಮನೆಗಳ ಗುರಿಯಿರಿಸಿ ಸುಮಾರು 13 ಸಾವಿರ ಮನೆಗಳನ್ನು ಈಗಾಗಲೇ ಕಟ್ಟಿಕೊಡಲಾಗಿದೆ‌. ಈ ಅವಧಿಯಲ್ಲಿ ಇನ್ನೂ 50 ಪ್ರತಿಶತ ಪೊಲೀಸ್​ ಗೃಹಗಳ ಕೆಲಸ ಆಗಲಿದೆ ಎಂದು ಗೃಹ ಸಚಿವರು ಮಾಹಿತಿ ನೀಡಿದರು.


Spread the love

About Laxminews 24x7

Check Also

1200 ರೈತರ ಆತ್ಮಹತ್ಯೆ: ಕಾಂಗ್ರೆಸ್ ಆಡಳಿತದಲ್ಲಿ ರೈತರ ಜೀವಕ್ಕಿಲ್ಲ ಬೆಲೆ- ಪ್ರಹ್ಲಾದ್ ಜೋಶಿ

Spread the love ಬೆಂಗಳೂರು ಜುಲೈ 26: ರಾಜ್ಯದಲ್ಲಿ ಕಳೆದ 15 ತಿಂಗಳಲ್ಲಿ 1200ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ