Breaking News

ಛತ್ತೀಸ್​ಗಢದಲ್ಲಿ ರೈತರೊಂದಿಗೆ ಭತ್ತ ಕಟಾವು ಮಾಡಿದ ರಾಹುಲ್​ ಗಾಂಧಿ!

Spread the love

ರಾಯ್‌ಪುರ (ಛತ್ತೀಸ್‌ಗಢ): ವಿಧಾನಸಭೆ, ಲೋಕಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ಜನರೊಂದಿಗೆ ಬೆರೆಯುವುದನ್ನು ಮುಂದುವರಿಸಿದ್ದಾರೆ.

ಚುನಾವಣಾ ರಾಜ್ಯವಾದ ಛತ್ತೀಸ್​ಗಢದಲ್ಲಿ ಪ್ರಚಾರ ನಡೆಸುತ್ತಿರುವ ಸಂಸದ, ಅಲ್ಲಿನ ರೈತರೊಂದಿಗೆ ಬೆಳೆ ಕಟಾವು ಮಾಡುವ ಮೂಲಕ ಗಮನ ಸೆಳೆದರು.

ರಾಜಧಾನಿ ರಾಯ್​ಪುರದ ಸಮೀಪದಲ್ಲಿರುವ ಕಥಿಯಾ ಗ್ರಾಮಕ್ಕೆ ಭೇಟಿ ನೀಡಿದ ಅವರು, ಭತ್ತದ ಗದ್ದೆಗಳಲ್ಲಿ ಬೆಳೆ ಕೊಯ್ಲು ಮಾಡುತ್ತಿದ್ದ ರೈತರ ಜೊತೆ ಸೇರಿಕೊಂಡ ಬೆಳೆ ಕಟಾವು ಮಾಡಿದರು. ಬಳಿಕ ಅವರ ಜೊತೆ ಸಂವಾದ ನಡೆಸಿದರು.

ರೈತರೊಂದಿಗೆ ರಾಹುಲ್​ ಗಾಂಧಿ ಗದ್ದೆಯಲ್ಲಿ ಕೆಲಸ ಮಾಡುತ್ತಿರುವ ಚಿತ್ರಗಳನ್ನು ಕಾಂಗ್ರೆಸ್​ ತನ್ನ ಎಕ್ಸ್​ (ಟ್ವಿಟರ್​) ಖಾತೆಯಲ್ಲಿ ಹಂಚಿಕೊಂಡಿದೆ. ರಾಹುಲ್​ ಭತ್ತವನ್ನು ಕೊಯ್ಲು ಮಾಡುತ್ತಿರುವುದು ಮತ್ತು ರೈತರೊಂದಿಗೆ ಮಾತುಕತೆ ನಡೆಸುತ್ತಿರುವುದನ್ನು ಕಾಣಬಹುದು. ಕಾಂಗ್ರೆಸ್​ ನಾಯಕನ ಜೊತೆಗೆ, ಮುಖ್ಯಮಂತ್ರಿ ಭೂಪೇಶ್ ಬಘೇಲ್, ಉಪಮುಖ್ಯಮಂತ್ರಿ ಟಿಎಸ್ ಸಿಂಗ್ ದೇವು ಗಾಂಧಿ ಸೇರಿದಂತೆ ಇತರರು ಜೊತೆಗಿದ್ದರು.

 

 

ಎಕ್ಸ್​ನಲ್ಲಿ ಚಿತ್ರಗಳು ಪೋಸ್ಟ್​: ರೈತರೊಂದಿಗೆ ಭೇಟಿಯ ನಂತರ, ರಾಹುಲ್​ ಗಾಂಧಿ ಅದರ ಚಿತ್ರಗಳನ್ನು ತಮ್ಮ ಎಕ್ಸ್​ ಖಾತೆಯಲ್ಲಿಯೂ ಹಂಚಿಕೊಂಡಿದ್ದಾರೆ. ರೈತರು ಸಂತೋಷವಾಗಿದ್ದರೆ ದೇಶ ಖುಷಿಯಾಗಿರುತ್ತದೆ. ಛತ್ತೀಸ್‌ಗಢದ ರೈತರಿಗೆ ಕಾಂಗ್ರೆಸ್ ಸರ್ಕಾರ 5 ಉತ್ತಮ ಯೋಜನೆಗಳನ್ನು ನೀಡಿದೆ. ಇದರಿಂದ ಅವರು ದೇಶದಲ್ಲಿಯೇ ಉತ್ತಮ ಸ್ಥಿತಿಯಲ್ಲಿದ್ದಾರೆ. ಪ್ರತಿ ಕ್ವಿಂಟಾಲ್​ ಭತ್ತಕ್ಕೆ 2,640 ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯನ್ನು 26 ಲಕ್ಷ ರೈತರಿಗೆ 23 ಸಾವಿರ ಕೋಟಿ ರೂಪಾಯಿ ಸಬ್ಸಿಡಿ, 19 ಲಕ್ಷ ರೈತರ 10 ಸಾವಿರ ಕೋಟಿ ರೂ.ಗಳ ಸಾಲ ಮನ್ನಾ, ವಿದ್ಯುತ್​ ಬಿಲ್​ ದರ ಅರ್ಧದಷ್ಟು ಕಡಿತ, 5 ಲಕ್ಷ ಕೃಷಿ ಕಾರ್ಮಿಕರಿಗೆ ವರ್ಷಕ್ಕೆ 7 ಸಾವಿರ ರೂಪಾಯಿ ನೀಡಿರುವುದು ಉತ್ತಮ ಯೋಜನೆಗಳಾಗಿವೆ ಎಂದು ಬರೆದುಕೊಂಡಿದ್ದಾರೆ.

 

 

ಬಳಿಕ ರಾಜನಂದಗಾಂವ್‌ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ, ಭೂರಹಿತ ಗ್ರಾಮೀಣ ಕಾರ್ಮಿಕರಿಗೆ ವಾರ್ಷಿಕ 10,000 ರೂಪಾಯಿ ಸೌಲಭ್ಯ, ಬಡವರಿಗೆ 10 ಲಕ್ಷದವರೆಗೆ ಉಚಿತ ಚಿಕಿತ್ಸಾ ಸೌಲಭ್ಯವನ್ನು ನೀಡಲಾಗುವುದು ಎಂದು ಘೋಷಿಸಿದ್ದಾರೆ.

ಈ ಹಿಂದಿನ ವಿದ್ಯಮಾನಗಳು: ಈ ಹಿಂದೆಯೂ ರಾಹುಲ್​ ಗಾಂಧಿ ಅವರು ಜನರೊಂದಿಗೆ ಬೆರೆಯುವ ಮೂಲಕ ಗಮನ ಸೆಳೆದಿದ್ದರು. ದೆಹಲಿಯಲ್ಲಿ ಬೈಕ್​ ರಿಪೇರಿ, ರೈಲ್ವೆ ಸ್ಟೇಶನ್​ ಬಳಿ ಸೂಟ್​ಕೇಸ್​ ಹೊರುವುದು, ಗದ್ದೆಯಲ್ಲಿ ನಾಟಿ, ರೈಲಿನಲ್ಲಿ ಜನರೊಂದಿಗೆ ಪ್ರಯಾಣಿಸಿದ್ದಲ್ಲದೆ, ಬಡಿಗ ಕೆಲಸವನ್ನೂ ಮಾಡಿದ್ದರು.


Spread the love

About Laxminews 24x7

Check Also

1200 ರೈತರ ಆತ್ಮಹತ್ಯೆ: ಕಾಂಗ್ರೆಸ್ ಆಡಳಿತದಲ್ಲಿ ರೈತರ ಜೀವಕ್ಕಿಲ್ಲ ಬೆಲೆ- ಪ್ರಹ್ಲಾದ್ ಜೋಶಿ

Spread the love ಬೆಂಗಳೂರು ಜುಲೈ 26: ರಾಜ್ಯದಲ್ಲಿ ಕಳೆದ 15 ತಿಂಗಳಲ್ಲಿ 1200ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ