ಬೆಳಗಾವಿ : ಚಿನ್ನದ ವ್ಯಾಪಾರಿಯೊಬ್ಬರ ಬಳಿ ಲಂಚ ಸ್ವೀಕರಿಸುತ್ತಿದ್ದ ಆದಾಯ ತೆರಿಗೆ ಅಧಿಕಾರಿಯನ್ನು ರೆಡ್ ಹ್ಯಾಂಡ್ ಆಗಿ ಪೊಲೀಸರು ವಶಕ್ಕೆ ಪಡೆದ ಘಟನೆ ಬೆಳಗಾವಿಯಲ್ಲಿ ಇಂದು ನಡೆದಿದೆ.
ಚಿಕ್ಕೋಡಿ ತಾಲೂಕಿನ ಅಂಕಲಿಯ ಪರಶುರಾಮ ಬಂಕಾಪುರ ಎಂಬ ಚಿನ್ನಾಭರಣ ಅಂಗಡಿ ಮಾಲೀಕನಿಗೆ ಹಣ ನೀಡುವಂತೆ ಐಟಿ ಅಧಿಕಾರಿ ಅವಿನಾಶ ಟೊನಪೆ ಕಿರುಕುಳ ನೀಡಿದ್ದರು. ಇದರಿಂದ ಚಿಂತಾಕ್ರಾಂತರಾದ ಚಿನ್ನಾಭರಣ ವ್ಯಾಪಾರಿ, ಎಸಿಪಿ ನಾರಾಯಣ ಭರಮನಿ ಅವರಿಗೆ ವಿಷಯ ತಿಳಿಸಿದ್ದಾರೆ. ವಿಷಯ ಗೊತ್ತಾಗುತ್ತಿದ್ದಂತೆ ಲಂಚಬಾಕ ಐಟಿ ಅಧಿಕಾರಿಗೆ ಬಲೆ ಹಾಕಲು ಎಸಿಪಿ ನಾರಾಯಣ ಭರಮನಿ ನೇತೃತ್ವದ ತಂಡ ಯೋಜನೆ ರೂಪಿಸಿತ್ತು.
ಇಂದು ನೀವು ಹೋಗಿ ಆ ಅಧಿಕಾರಿಗೆ ಹಣ ನೀಡಿ. ಆಗ ನಾವು ಬರುತ್ತೇವೆ ಎಂದು ಹೇಳಿ ಕಳುಹಿಸಿದ್ದಾರೆ. ಕವರ್ನಲ್ಲಿ 40 ಸಾವಿರ ರೂ ಹಣ ಇಟ್ಟುಕೊಂಡು ಚಿನ್ನಾಭರಣ ವ್ಯಾಪಾರಿ, ಐಟಿ ಅಧಿಕಾರಿ ಇದ್ದ ಬೆಳಗಾವಿಯ ಕೆಎಲ್‌ಇ ಡೆಂಟಲ್ ಕಾಲೇಜು ಮೈದಾನಕ್ಕೆ ತೆರಳಿದ್ದಾರೆ. ಹಣದ ಕವರ್ ಐಟಿ ಅಧಿಕಾರಿ ಕೈಗೆ ಸೇರುತ್ತಿದ್ದಂತೆ ಮಪ್ತಿಯಲ್ಲಿದ್ದ ಪೊಲೀಸರು ಅಧಿಕಾರಿಯನ್ನು ವಶಕ್ಕೆ ಪಡೆದರು.
ದೂರುದಾರ ಹೇಳಿದ್ದೇನು?: ಘಟನೆ ಕುರಿತು ದೂರುದಾರ ಪರಶುರಾಮ ಬಂಕಾಪುರ ಮಾಧ್ಯಮಗಳ ಜೊತೆಗೆ ಮಾತನಾಡಿ, “ಐಟಿ ಅಧಿಕಾರಿ ಬೇಡಿಕೆ ಇಟ್ಟಿದ್ದು ಐದು ಲಕ್ಷ ರೂಪಾಯಿ. ನಾನು ಪಾಕೆಟ್ನಲ್ಲಿ ಹಾಕಿದ್ದು 40 ಸಾವಿರ ರೂಪಾಯಿ. ಪೊಲೀಸರ ಸೂಚನೆಯಂತೆ ಪ್ಲಾನ್ ಮಾಡಲಾಗಿತ್ತು. ಅವರು ನಿಪ್ಪಾಣಿಯಲ್ಲಿ ಐಟಿ ಅಧಿಕಾರಿ ಅಂತಾ ಸಾಬೀತಾಗಿದೆ. ನಾಲ್ಕೈದು ದಿನಗಳ ಹಿಂದೆ ನಾಲ್ಕು ಜನ ಐಟಿ ಅಧಿಕಾರಿಗಳು ಬಂದಿದ್ದರು. ಇಂದು ಒಬ್ಬರೇ ಬಂದಿದ್ದು. ಅವರು ನಮಗೆ ಹಣದ ಬೇಡಿಕೆ ಇಟ್ಟ ಕುರಿತು ಎಲ್ಲಾ ದಾಖಲೆಗಳೂ ನಮ್ಮ ಬಳಿ ಇವೆ” ಎಂದರು.
₹20 ಸಾವಿರ ಲಂಚ, ಸಿಕ್ಕಿಬಿದ್ದ ಪೊಲೀಸ್ ಹೆಡ್ ಕಾನ್‌ಸ್ಟೆಬಲ್: ಲಂಚ ಪಡೆಯುವಾಗ ಹನುಮಂತ ನಗರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಲೋಕಾಯುಕ್ತ ಪೊಲೀಸರಿಗೆ (ಅಕ್ಟೋಬರ್, 4, 2023) ಸಿಕ್ಕಿಬಿದ್ದಿದ್ದರು. ಕವಿನ್ ಬಂಧಿತ ಅಧಿಕಾರಿ. ವಾಹನ ಬಿಡುಗಡೆಗೆ ಶಿವಕುಮಾರ್ ಎಂಬವರ ಬಳಿ ಆರೋಪಿ ಅಧಿಕಾರಿ 25 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಶಿವಕುಮಾರ್ ಲೋಕಾಯಕ್ತಕ್ಕೆ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೊಂಡಿದ್ದರು.