Breaking News

ಬ್ಯಾರಲ್​ ಬಳಸಿ ಸೇತುವೆ ನಿರ್ಮಾಣ ಮಾಡಿದ ರೈತರು.

Spread the love

ಬಾಗಲಕೋಟೆ : ರೈತರು ಮನಸ್ಸು ಮಾಡಿದರೆ ಯಾವ ಸಮಸ್ಯೆಯನ್ನೂ ಬಗೆಹರಿಸಿಕೊಳ್ಳಬಹುದು ಎಂಬುದನ್ನು ಬಾಗಲಕೋಟೆಯ ಜಮಖಂಡಿ ರೈತರು ತೋರಿಸಿಕೊಟ್ಟಿದ್ದಾರೆ. ಇಲ್ಲಿನ ಕೃಷ್ಣಾ ನದಿಗೆ ಅಡ್ಡಲಾಗಿ ಬ್ಯಾರಲ್​ ಸೇತುವೆ ನಿರ್ಮಾಣ ಮಾಡುವ ಮೂಲಕ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಮೂಲಕ ದಶಕಗಳಿಂದ ಜಮಖಂಡಿ ತಾಲೂಕಿನ ಕಂಕಣವಾಡಿ ಗ್ರಾಮಸ್ಥರು ಎದುರಿಸುತ್ತಿದ್ದ ಸಮಸ್ಯೆಗೆ ರೈತರು ಪರಿಹಾರ ಕಂಡುಕೊಂಡಿದ್ದಾರೆ.

ರೈತರಿಂದ ಬ್ಯಾರಲ್​ ಸೇತುವೆ ನಿರ್ಮಾಣ : ಗ್ರಾಮದ ರೈತರು ಸ್ವತಃ ತಾವೇ ಹಣ ಸಂಗ್ರಹಿಸಿ ನದಿ ದಾಟಲು ಬ್ಯಾರಲ್ ಸೇತುವೆ ನಿರ್ಮಾಣ ಮಾಡಿ ಗಮನ ಸೆಳೆದಿದ್ದಾರೆ. ಕೃಷ್ಣಾ ನದಿಗೆ ಅಡ್ಡಲಾಗಿ 600 ಅಡಿ ಉದ್ದ ಹಾಗೂ 8 ಅಡಿ ಅಗಲವಾದ ಬ್ಯಾರಲ್ ಸೇತುವೆ ನಿರ್ಮಾಣ ಮಾಡಲಾಗಿದೆ. ಈ ಮೂಲಕ ಜಮೀನಿಗೆ ಹಾಗೂ‌ ಮನೆಗಳಿಗೆ ತೆರಳುವ ಜನರಿಗೆ ಅನುಕೂಲ ಮಾಡಿಕೊಡಲಾಗಿದೆ. ಅಂದಾಜು ಇನ್ನೂರು ರೈತ ಕುಟುಂಬಗಳು ವಂತಿಗೆ ಸಂಗ್ರಹಿಸಿ 7.25 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಿದ್ದಾರೆ.

7 ಲಕ್ಷ ವೆಚ್ಚದಲ್ಲಿ ಸೇತುವೆ : ಕೃಷ್ಣಾ ನದಿಯಲ್ಲಿ ನೀರು ಪ್ರಮಾಣ ಹೆಚ್ಚಾದರೆ ಇಲ್ಲಿನ ಕಬ್ಬು ಬೆಳೆಗಾರರು ತಮ್ಮಬೆಳೆಯನ್ನು ಜಮೀನಿನಿಂದ ಮಾರುಕಟ್ಟೆಗೆ ಸಾಗಿಸಲು ಗ್ರಾಮವನ್ನು ಸುತ್ತುವರೆದು ಹೋಗಬೇಕು. ಇಲ್ಲದಿದ್ದರೆ ಕಬ್ಬು ಬೆಳೆಯನ್ನು ಟ್ರ್ಯಾಕ್ಟರ್ ಸಮೇತ ಬೋಟ್​ನಲ್ಲಿ ಸಾಗಿಸಬೇಕು. ಬೋಟ್​ನಲ್ಲಿ ಒಂದು ಲೋಡ್ ಕಬ್ಬು ಸಾಗಿಸಬೇಕಾದರೆ ರೈತರು 800ರಿಂದ 1000 ರೂಪಾಯಿ ಪಾವತಿಸಬೇಕಾಗುತ್ತದೆ. ಬೋಟ್​ನಲ್ಲಿ ಸಾಗಿಸುವುದರಿಂದ ಅಪಾಯ ಜಾಸ್ತಿ ಇರುತ್ತದೆ ಎಂದು ರೈತರು ಹೇಳುತ್ತಾರೆ.

ಇದಕ್ಕೆಲ್ಲ ಪರಿಹಾರವನ್ನು ಕಂಡು‌ಕೊಳ್ಳಲು ಊರಿನ ರೈತರೇ ಸೇರಿಕೊಂಡು ಬ್ಯಾರಲ್​ ಸೇತುವೆ ನಿರ್ಮಾಣ ಮಾಡುವ ಯೋಜನೆ ರೂಪಿಸಿದರು. ಈ ಸಂಬಂಧ ಗ್ರಾಮದಲ್ಲಿನ ರೈತರೆಲ್ಲ ಸೇರಿಕೊಂಡು ವಂತಿಕೆ ಸಂಗ್ರಹ ಮಾಡಿದರು. ಬಳಿಕ ಇನ್ನೂರಕ್ಕೂ‌ ಹೆಚ್ಚು ರೈತರು ಸೇರಿಕೊಂಡು ವಂತಿಗೆಯ ಹಣದಿಂದ ಬ್ಯಾರಲ್​ ಸೇತುವೆ ನಿರ್ಮಾಣ ಮಾಡಿದರು. ಈ ಬ್ಯಾರಲ್​ ಸೇತುವೆಯನ್ನು ವಿಶಿಷ್ಟವಾಗಿ ಮಾಡಲಾಗಿದೆ. ನೂರಾರು ಬ್ಯಾರೆಲ್​ಗಳನ್ನು ಕ್ರಮವಾಗಿ ಜೋಡಿಸಿ ಈ ಸೇತುವೆಯನ್ನು ಕಟ್ಟಲಾಗಿದೆ.

ಈ ಸೇತುವೆಯಿಂದ ರೈತರಿಗೆ ಸಾಕಷ್ಟು ಅನುಕೂಲವಾಗಿದೆ. ಈ ಬ್ಯಾರೆಲ್​ ನೀರಿನಲ್ಲಿ ತೇಲುವುದರಿಂದ ಜನರು ಇದರಲ್ಲಿ ಸಾಗಬಹುದು. ಈ ಸೇತುವೆಯು ಜನರ ಸಂಚಾರಕ್ಕೆ ಮಾತ್ರವಲ್ಲದೆ ಜಮೀನುಗಳಿಂದ ಕಬ್ಬು ಬೆಳೆ ಸೇರಿದಂತೆ ವಿವಿಧ ವಸ್ತುಗಳ ಸಾಗಾಣಿಕೆಗೂ ಉಪಯೋಗವಾಗಲಿದೆ. ಜಿಲ್ಲೆಯ ರೈತರ ಕಾರ್ಯ ಇತರರಿಗೆ ಮಾದರಿಯಾಗಿದೆ.


Spread the love

About Laxminews 24x7

Check Also

ಹಾವೇರಿ: ಶರಣ ಚೌಡಯ್ಯ ಐಕ್ಯ ಮಂಟಪಕ್ಕೆ ಜಲದಿಗ್ಬಂಧನ, ತೆಪ್ಪದಲ್ಲಿ ತೆರಳಿ ಭಕ್ತರಿಂದ ಪೂಜೆ

Spread the loveಹಾವೇರಿ: ಸಂತರ, ಶರಣರ ಮತ್ತು ದಾರ್ಶನಿಕರ ಜಿಲ್ಲೆ ಹಾವೇರಿ. ಇಲ್ಲಿ ಸರ್ವಜ್ಞ, ಅಂಬಿಗರ ಚೌಡಯ್ಯ, ಕನಕದಾಸರು, ಶಿಶುನಾಳ ಶರೀಫರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ