ಮಹಾರಾಷ್ಟ್ರ/ಗುಜರಾತ್: ಬಿಪೊರ್‌ಜಾಯ್ ಚಂಡಮಾರುತ ಇಂದು ತೀವ್ರಗೊಂಡಿದೆ.
ಇದರಿಂದ ಮುಂಬೈ ಮತ್ತು ಗುಜರಾತ್ ಕರಾವಳಿಯಲ್ಲಿ ಅಲೆಗಳ ಉಬ್ಬರವಿಳಿತ ಹೆಚ್ಚಾಗಿದೆ. ಚಂಡಮಾರುತದ ಆರ್ಭಟಕ್ಕೆ ಕಡಲಿನ ಅಲೆಗಳು ದಡಕ್ಕೆ ಬಂದು ಅಪ್ಪಳಿಸುತ್ತಿವೆ.
ಚಂಡಮಾರುತ ಮುಂದಿನ ದಿನಗಳಲ್ಲಿ ಗುಜರಾತ್ ಮತ್ತು ಪಾಕಿಸ್ತಾನದ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. ಸೌರಾಷ್ಟ್ರ ಮತ್ತು ಗುಜರಾತ್‌ನ ಕಚ್ ಕರಾವಳಿಯಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಆರೆಂಜ್ ಅಲರ್ಟ್ ನೀಡಿದೆ. ಈ ವಾರಾಂತ್ಯದಲ್ಲಿ ಮತ್ತು ಸೋಮವಾರ ಬೆಳಗ್ಗೆ ಕರಾವಳಿ ನಗರಗಳಾದ ಮುಂಬೈ ಮತ್ತು ನವಸಾರಿಯಲ್ಲಿ ಹೆಚ್ಚಿನ ಅಲೆಗಳ ಆರ್ಭಟ ಕಂಡು ಬಂದಿದೆ.
ಅರಬ್ಬೀ ಸಮುದ್ರದಲ್ಲಿನ ಬಿಪೊರ್‌ಜಾಯ್ ಚಂಡಮಾರುತ ಈ ಹಿಂದೆ ಪಾಕಿಸ್ತಾನದ ಕರಾವಳಿಯತ್ತ ಸಾಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಈಗ ಉತ್ತರ ಗುಜರಾತ್ ಕರಾವಳಿಯ ಕಡೆಗೆ ಸ್ವಲ್ಪ ಪೂರ್ವಕ್ಕೆ ಚಲಿಸುತ್ತದೆ. ಜೂನ್ 15 ರಂದು ಭೂಕುಸಿತ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
2-3 ಮೀಟರ್ ಚಂಡಮಾರುತದ ಏರಿಳಿತ, ಗುಜರಾತ್‌ನ ಪಶ್ಚಿಮ ಕರಾವಳಿ ಜಿಲ್ಲೆಗಳಲ್ಲಿ ಹುಲ್ಲಿನ ಮನೆಗಳ ನಾಶ, ರಸ್ತೆಗಳಿಗೆ ಹಾನಿ, ಪ್ರವಾಹ, ಬೆಳೆದ ಬೆಳೆಗಳು ಮತ್ತು ತೋಟಗಳಿಗೆ ವ್ಯಾಪಕ ಹಾನಿ, ಉತ್ತರದಲ್ಲಿ ರೈಲ್ವೆ, ವಿದ್ಯುತ್ ಮಾರ್ಗಗಳು ಮತ್ತು ಸಿಗ್ನಲಿಂಗ್ ವ್ಯವಸ್ಥೆಗಳಿಗೆ ಅಡ್ಡಿಯಾಗುವ ನಿರೀಕ್ಷೆಯಿದೆ ಎಂದು ಭಾರತ ಮೂಲದ ಪ್ರಾದೇಶಿಕ ವಿಶೇಷ ಹವಾಮಾನ ಕೇಂದ್ರದ (RSMC) ಬುಲೆಟಿನ್ ಹೇಳಿಕೆಯಲ್ಲಿ ತಿಳಿಸಿದೆ.
ಗುಜರಾತ್ ಸರ್ಕಾರದ ಪ್ರಕಾರ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) ಏಳು ತಂಡಗಳು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಯ 12 ತಂಡಗಳನ್ನು ಸೌರಾಷ್ಟ್ರ ಪ್ರದೇಶದಲ್ಲಿ ನಿಯೋಜಿಸಲಾಗಿದೆ. ಎನ್‌ಡಿಆರ್‌ಎಫ್‌ನ ಮೂರು ತಂಡಗಳು ಭಾರತೀಯ ನೌಕಾಪಡೆ, ಭಾರತೀಯ ಕರಾವಳಿ ಕಾವಲು ಪಡೆ, ಭಾರತೀಯ ವಾಯುಪಡೆ ಮತ್ತು ಭಾರತೀಯ ಸೇನೆಯೊಂದಿಗೆ ಗಸ್ತಿನಲ್ಲಿವೆ. ಹೆಚ್ಚುವರಿಯಾಗಿ ಭಾರತೀಯ ನೌಕಾಪಡೆಯ ಎಲ್ಲಾ ಹಡಗುಗಳಿಗೆ ಎಚ್ಚರಿಕೆ ನೀಡಲಾಗಿದೆ ಮತ್ತು ಸುರಕ್ಷಿತ ಸ್ಥಾನಗಳತ್ತ ಸಾಗಲು ಸೂಚನೆ ನೀಡಲಾಗುತ್ತದೆ.
ಬಿಪೊರ್‌ಜಾಯ್ ಈಗಾಗಲೇ “ಅತ್ಯಂತ ತೀವ್ರ ಸ್ವರೂಪದ ಚಂಡಮಾರುತ”ವಾಗಿ ಮಾರ್ಪಟ್ಟಿದೆ. ಭಾನುವಾರ ಸಂಜೆ ಮುಂಬೈನಿಂದ ಪಶ್ಚಿಮಕ್ಕೆ 540 ಕಿ.ಮೀ ದೂರದಲ್ಲಿತ್ತು. ಇದು ಜೂನ್ 14 ರ ಬೆಳಗ್ಗೆ ತನಕ ಉತ್ತರದ ಕಡೆಗೆ ಚಲಿಸುವ ಸಾಧ್ಯತೆಯಿದೆ. ನಂತರ ಉತ್ತರ – ಈಶಾನ್ಯಕ್ಕೆ ಚಲಿಸುತ್ತದೆ ಮತ್ತು ಜೂನ್ 15 ರ ಮಧ್ಯಾಹ್ನದ ವೇಳೆಗೆ ಗುಜರಾತ್‌ನ ಮಾಂಡ್ವಿ ಮತ್ತು ಪಾಕಿಸ್ತಾನದ ಕರಾಚಿ ನಡುವೆ ಸೌರಾಷ್ಟ್ರ ಮತ್ತು ಕಚ್ ಮತ್ತು ಪಕ್ಕದ ಪಾಕಿಸ್ತಾನದ ಕರಾವಳಿಯನ್ನು ದಾಟುತ್ತದೆ” ಎಂದು ಭಾನುವಾರ ಸಂಜೆ ಐಎಂಡಿ ಬುಲೆಟಿನ್ ಹೇಳಿದೆ.
ಶನಿವಾರ ಮಧ್ಯಾಹ್ನದವರೆಗೆ ಬಿಪೊರ್‌ಜಾಯ್ ಗುಜರಾತ್ ಕರಾವಳಿಯನ್ನು ದಾಟಿ ಪಾಕಿಸ್ತಾನದ ಕರಾವಳಿಯತ್ತ ಸಾಗುತ್ತದೆ. ಶನಿವಾರದಂದು ಪ್ರಾದೇಶಿಕ ವಿಶೇಷ ಹವಾಮಾನ ಕೇಂದ್ರದ( RSMC)ಬುಲೆಟಿನ್ ಚಂಡಮಾರುತ “ಮುಂದಿನ 24 ಗಂಟೆಗಳಲ್ಲಿ (ಭಾನುವಾರದವರೆಗೆ) ಉತ್ತರ – ಈಶಾನ್ಯಕ್ಕೆ ಚಲಿಸುವ ಸಾಧ್ಯತೆಯಿದೆ” ಮತ್ತು “ನಂತರದ ಮೂರು ದಿನಗಳಲ್ಲಿ ಕ್ರಮೇಣ ಉತ್ತರ-ವಾಯುವ್ಯದ ಕಡೆಗೆ” ಸಾಗುತ್ತದೆ ಎಂದು ಹೇಳಿತ್ತು.
ಅರಬ್ಬೀ ಸಮುದ್ರದಲ್ಲಿನ ಚಂಡಮಾರುತಗಳು ಸಾಮಾನ್ಯವಾಗಿ ಭಾರತದ ಕರಾವಳಿಯ ಕಡೆಗೆ ಚಲಿಸುವುದಿಲ್ಲ. ಅವುಗಳಲ್ಲಿ ಹೆಚ್ಚಿನ ಎಲ್ಲಾ ಅರೇಬಿಯನ್ ಸಮುದ್ರದ ಚಂಡಮಾರುತಗಳಲ್ಲಿ ಶೇ.75 ಕ್ಕಿಂತ ಹೆಚ್ಚು, ಉತ್ತರಕ್ಕೆ ಅಥವಾ ವಾಯವ್ಯಕ್ಕೆ ಚಲಿಸುತ್ತವೆ. ಆ ಸಂದರ್ಭದಲ್ಲಿ, ಅವರ ಪಥವು ಪಾಕಿಸ್ತಾನ, ಇರಾನ್ ಅಥವಾ ಒಮಾನ್ ಕಡೆಗೆ ಚಲಿಸುತ್ತವೆ. ಅವುಗಳಲ್ಲಿ ಕೆಲವು ಸಮುದ್ರದ ಮೇಲೆ ತಮ್ಮ ಶಕ್ತಿಯನ್ನು ಹೊರಹಾಕುತ್ತವೆ. ಅವರಲ್ಲಿ ಕೇವಲ ಶೇ. 25ಕ್ಕಿಂತ ಕಡಿಮೆ ಈಶಾನ್ಯಕ್ಕೆ, ಮುಖ್ಯವಾಗಿ ಗುಜರಾತ್ ಕರಾವಳಿಯ ಕಡೆಗೆ ಚಲಿಸುತ್ತವೆ.
ತಗ್ಗು ಪ್ರದೇಶಗಳ ಜನರ ಸ್ಥಳಾಂತರ: ಗುಜರಾತ್‌ನ ಕಚ್‌ನಲ್ಲಿರುವ ಕಾಂಡ್ಲಾದಲ್ಲಿರುವ ದೀನದಯಾಳ್ ಬಂದರು ಪ್ರಾಧಿಕಾರದ ಅಧಿಕಾರಿಗಳು ತಗ್ಗು ಪ್ರದೇಶಗಳಿಂದ ಜನರನ್ನು ತಾತ್ಕಾಲಿಕ ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸುತ್ತಿದ್ದಾರೆ. ಯಾವುದೇ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಎಚ್ಚರದಿಂದ ಇರುವಂತೆ ಅವರಿಗೆ ತಿಳಿಸಲಾಗಿದೆ.
ಸನ್ನದ್ಧತೆ ಪರಾಮರ್ಶಿಸಿದ ಸಿಎಂ: ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಗಾಂಧಿನಗರದಲ್ಲಿರುವ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಗುಜರಾತ್‌ನ ಕರಾವಳಿಯ ಜಿಲ್ಲಾಧಿಕಾರಿಗಳೊಂದಿಗೆ ವಿಪತ್ತು ನಿರ್ವಹಣೆ ಮತ್ತು ಸಿದ್ಧತೆಗಳನ್ನು ಪರಿಶೀಲಿಸಿದರು. ವಿದ್ಯುತ್, ನೀರು, ಔಷಧಗಳಂತಹ ಅಗತ್ಯ ವಸ್ತುಗಳ ಪೂರೈಕೆಯನ್ನು ಖಾತ್ರಿಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚಿಸಿದರು. ತುರ್ತು ಸೇವೆಗಳನ್ನು ಮರುಸ್ಥಾಪಿಸಲು ತಂಡಗಳು, ಪಂಪಿಂಗ್ ಯಂತ್ರಗಳು ಮತ್ತು ಜನರೇಟರ್‌ಗಳು ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ವಾಯುಪಡೆ, ನೌಕಾಪಡೆ, ಕೋಸ್ಟ್ ಗಾರ್ಡ್ ಮತ್ತು ಸೇನೆಯು ಚಂಡಮಾರುತದ ಪ್ರಭಾವವನ್ನು ಎದುರಿಸಲು ಸನ್ನದ್ಧವಾಗಿರಲು ರಾಜ್ಯ ಸರ್ಕಾರ ಮನವಿ ಮಾಡಿದೆ.