Breaking News

ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನ ಕಳೆದಂತೆ ಬಿಸಿಲು ಕೆಂಡದಂತಾಗಿದೆ. ಗ್ರಾಮಗಳಲ್ಲಿ ನೀರಿನ ಕೊರತೆ

Spread the love

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನ ಕಳೆದಂತೆ ಬಿಸಿಲು ಕೆಂಡದಂತಾಗಿದೆ.

ಹೀಗಾಗಿ, ಅಂತರ್ಜಲ ಮಟ್ಟ ತಳ ತಲುಪಿದ್ದು, ನೀರಿಗಾಗಿ ಹಾಹಾಕಾರ ಶುರುವಾಗಿದೆ. ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಗ್ರಾಮಗಳಲ್ಲಿ ನೀರಿನ ಕೊರತೆ ಎದುರಾಗಿರುವ ಕಾರಣ ಕೆಲವೆಡೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಿ ದಾಹ ತೀರಿಸುವ ಪರಿಸ್ಥಿತಿ ಬಂದೊದಗಿದೆ.

ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿಂದ ಬೀಸಿಲಿನ ತಾಪಕ್ಕೆ ಜನ ನಿತ್ಯವೂ ಬಸವಳಿಯುತ್ತಿದ್ದಾರೆ. ಕಳೆದೆರಡು ದಿನದ ಹಿಂದೆ ಕೆಲ ಗಂಟೆಗಳ ಕಾಲ ಮಳೆ ಸುರಿದಿತ್ತಾದರೂ ಮತ್ತೆ ಮಳೆ ಮಾಯವಾಗಿರುವುದರಿಂದ ಸೆಕೆ ಹೆಚ್ಚಾಗಿದೆ. ಮಾತ್ರವಲ್ಲದೇ, ಜಿಲ್ಲೆಯ ಪ್ರಮುಖ ನದಿಗಳಲ್ಲಿ ನೀರಿನ ಹರಿವು ತುಂಡರಿಸುವ ಹಂತಕ್ಕೆ ತಲುಪಿದ್ದು, ನದಿಗಳಿಂದ ನೀರು ಪೂರೈಕೆಯೇ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ಅದರಲ್ಲಿಯೂ ಕರಾವಳಿ ಭಾಗದಲ್ಲಿ ನೀರು ಬರಿದಾಗುತ್ತಿರುವ ಬೆನ್ನಲ್ಲೇ ಇರುವ ಅಲ್ಪ ಸ್ವಲ್ಪ ನೀರಿಗೂ ಉಪ್ಪು ನೀರು ಸೇರಿಕೊಳ್ಳುತ್ತಿರುವುದು ಸಮಸ್ಯೆ ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ.

ಕುಸಿದ ಅಂತರ್ಜಲಮಟ್ಟ: ಉತ್ತರಕನ್ನಡದ 110 ಕ್ಕೂ ಹೆಚ್ಚು ಗ್ರಾಮಗಳಲ್ಲಿ ನೀರಿನ ಕೊರತೆ

“ಕಾರವಾರ, ಅಂಕೋಲಾ ನಗರ ಹಾಗೂ ವಿವಿಧ ಗ್ರಾಮಗಳಿಗೆ ನೀರು ಪೂರೈಸುವ ಗಂಗಾವಳಿ, ಕುಮಟಾ, ಹೊನ್ನಾವರಕ್ಕೆ ನೀರು ಪೂರೈಸುವ ಅಘನಾಶಿನಿಯಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಶಿರಸಿ ನಗರಕ್ಕೆ ನೀರು ಪೂರೈಸುವ ಕೆಂಗ್ರೆ ಹೋಳೆ ಹರಿವು ನಿಲ್ಲಿಸಿದೆ. ಭಟ್ಕಳದಲ್ಲಿ ಕಡವಿನ ಕಟ್ಟಾ ಡ್ಯಾಂನಲ್ಲಿ ನೀರು ಕಡಿಮೆಯಾಗಿದೆ. ಸದ್ಯಕ್ಕೆ ಎಲ್ಲ ನಗರಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗದಿದ್ದರೂ ಇದೇ ವಾತಾವರಣ ಮುಂದುವರಿದಲ್ಲಿ ತಿಂಗಳ ಅಂತ್ಯಕ್ಕೆ ಎಲ್ಲ ನದಿಗಳಿಂದ ನೀರು ಪೂರೈಕೆ ಸಂಪೂರ್ಣ ಸ್ಥಗಿತಗೊಳ್ಳುವ ಆತಂಕ ಶುರುವಾಗಿದೆ” ಎಂದು ಸ್ಥಳೀಯರಾದ ರವಿ ಕಸಬೇಕರ್ ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನು ಕಳೆದ ಬಾರಿ ಜಿಲ್ಲೆಯ 111 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗಿತ್ತು. ಈ ಬಾರಿ ಜಿಲ್ಲೆಯ 110 ಕ್ಕೂ ಹೆಚ್ಚು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಬಹುದು ಎಂದು ಜಿಲ್ಲಾ ಟಾಸ್ಕ್ ಫೋರ್ಸ್ ಅಂದಾಜಿಸಿದೆ. ಕಾರವಾರ ಕಾಳಿ ನದಿಯ ಬಲ ದಂಡೆಯಲ್ಲಿರುವ ಹಣಕೋಣ, ಕದ್ರಾ, ಗೋಟೆಗಾಳಿ ಅಸ್ನೋಟಿ ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಅಸ್ನೋಟಿ ಗ್ರಾ.ಪಂನಲ್ಲಿ ಈಗಾಗಲೇ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ. ಕದ್ರಾ ಗ್ರಾ.ಪಂ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಕಂಡು ಬಂದಿದ್ದು, ಗ್ರಾಮಸ್ಥರು ಗ್ರಾ.ಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಹಳಿಯಾಳದ ಮಂಗಳವಾಡ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ ಉಂಟಾದ ಬಗ್ಗೆ ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದ್ದು, ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.

 

ತುರ್ತು ಪರಿಹಾರಕ್ಕೆ ಸೂಚನೆ : ಜಿಲ್ಲೆಯಲ್ಲಿ ಈವರೆಗೆ ಯಾವುದೇ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿಲ್ಲ. ಇದರಿಂದ ನೀರು ಪೂರೈಕೆಗೆ ಯಾವುದೇ ವಿಶೇಷ ಅನುದಾನ ಇಲ್ಲದಂತಾಗಿದೆ. ಸ್ಥಳೀಯ ಅನುದಾನ ಹೊಂದಿಸಿಕೊಂಡು ಸಮಸ್ಯೆಗೆ ತುರ್ತು ಪರಿಹಾರ ಕಂಡುಕೊಳ್ಳಲು ಸೂಚಿಸಲಾಗಿದೆ. ತೀರ ಅಗತ್ಯವಿದ್ದಲ್ಲಿ ಬೋರ್​ವೆಲ್​ಗಳನ್ನು ಅಳವಡಿಸಬೇಕು. ಪೈಪ್ಲೈನ್ ಇದ್ದು, ನೀರು ಸಿಗುತ್ತಿಲ್ಲ ಎಂದಾದರೆ ಪೈಪ್ಲೈನ್ ದುರಸ್ತಿಗೆ ಕ್ರಮ ವಹಿಸಬೇಕು. ಇದ್ಯಾವುದೂ ಆಗದೇ ಇದ್ದಲ್ಲಿ ಅಂತಿಮವಾಗಿ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ವ್ಯವಸ್ಥೆ ಮಾಡಬೇಕು ಎಂದು ತಾಪಂ ಇಒಗಳ ಸಭೆ ಕರೆದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

 

ಈ ಬಗ್ಗೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರನ್ನು ಕೇಳಿದಾಗ ಮಾನ್ಸೂನ್ ಸಿದ್ಧತೆ ಜೊತೆಗೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿರುವ ಕಾರಣ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಾರಿ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.64 ರಷ್ಟು ಕಡಿಮೆ ಮಳೆಯಾಗಿದೆ. ಈಗಾಗಲೇ ಹಲವು ಗ್ರಾಮಗಳಲ್ಲಿ ನೀರಿನ ಕೊರತೆ ಎದುರಾಗಿದ್ದು, ಅಂತಹ ಗ್ರಾಮಗಳಿಗೆ ನೀರು ಪೂರೈಕೆಗೆ ಸೂಚಿಸಲಾಗಿದೆ. ಯಾವುದೇ ರಿತಿಯ ಅನುದಾನದ ಕೊರತೆ ಇಲ್ಲ. ಈಗಾಗಲೇ ಹಲವು ಬಾರಿ ಅಧಿಕಾರಿಗಳ ಸಭೆ ನಡೆಸಿದ್ದು ಎಲ್ಲರಿಗೂ ಕೂಡ ಕೇಂದ್ರ ಸ್ಥಾನ ತೊರೆಯದಂತೆ ಸೂಚಿಸಲಾಗಿದೆ. ಯಾವುದಾದರೂ ಗ್ರಾಮದಲ್ಲಿ ಸಮಸ್ಯೆಗಳು ಕಂಡುಬಂದಲ್ಲಿ ಗ್ರಾಮ ಪಂಚಾಯಿತಿ ಇಲ್ಲವೇ ತಮ್ಮ ಗಮನಕ್ಕೆ ತರುವಂತೆ ಸೂಚಿಸಿದ್ದಾರೆ.

ಒಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಬಾರದ ಬೆನ್ನಲ್ಲೇ ನೀರಿನ ಸಮಸ್ಯೆ ಜೋರಾಗತೊಡಗಿದೆ. ಅಂತರ್ಜಲ ಮಟ್ಟ ತಳಪಾಯ ಕಂಡು ನೀರಿನ ಮೂಲಗಳು ಬತ್ತಿಹೋಗತೊಡಗಿದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಜನ ಪರದಾಡುವಂತಾಗಿದೆ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮವಹಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.


Spread the love

About Laxminews 24x7

Check Also

ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

Spread the love ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಕಲಬುರಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ