ಬೆಂಗಳೂರು, ಅಕ್ಟೋಬರ್, 22- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ದೇಶಿಯ ನಿರ್ಮಿತ ಓಲೆಕ್ಟ್ರಾ ಎಲೆಕ್ಟ್ರಿಕ್ ಬಸ್ ಪರೀಕ್ಷಾರ್ಥ ಸಂಚಾರಕ್ಕೆ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಇಂದು ಚಾಲನೆ ನೀಡಿದರು. ಬಿಎಂಟಿಸಿಯ ಕೇಂದ್ರ ಕಚೇರಿ ಆವರಣದಲ್ಲಿ ಈ ಬಸ್‍ಗೆ ಚಾಲನೆ ನೀಡಿದ ನಂತರ ವಿಧಾನಸೌಧದವರೆಗೂ ಅದೇ ಬಸ್‍ನಲ್ಲಿ ಪ್ರಯಾಣಿಸಿದರು.
ವಿಧಾನಸೌಧದ ಆವರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕೂಡ ಎಲೆಕ್ಟ್ರಿಕ್ ಬಸ್‍ನ್ನು ವೀಕ್ಷಣೆ ಮಾಡಿ ನಂತರ ಉಪಮುಖ್ಯಮಂತ್ರಿಯವರಿಂದ ಮಾಹಿತಿ ಪಡೆದರು.ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮಣ್ ಸವದಿ, ಬಿಎಂಟಿಸಿಗೆ 300 ಎಲೆಕ್ಟ್ರಿಕ್ ಬಸ್‍ಗಳನ್ನು ಖರೀದಿಸುವ ಉದ್ದೇಶವಿದೆ. ಪ್ರಾಯೋಗಿಕ ಬಸ್ ಆಗಿದ್ದು, ಇದು ಎಲ್ಲ ರೀತಿಯಲ್ಲಿ ಅನುಕೂಲವಾಗಿದ್ದರೆ ಆನಂತರ ಎಲೆಕ್ಟ್ರಿಕ್ ಬಸ್‍ಗಳನ್ನು ಬಳಕೆ ಮಾಡಲಾಗುವುದು. ಪ್ರತಿ ಬಸ್‍ಗೆ ಭಾರೀ ಕೈಗಾರಿಕೆ ಇಲಾಖೆಯು 55 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಿದೆ ಎಂದರು.
ರಾಜ್ಯದ ಸರ್ಕಾರದ 2021-22ನೇ ಸಾಲಿನ ಆಯವ್ಯಯದಲ್ಲಿ ಫೇಮ್-2 ಅಡಿಯಲ್ಲಿ ಎಲೆಕ್ಟ್ರಿಕ್ ಬಸ್‍ಗಳನ್ನು ಜಿಸಿಸಿ ಆಧಾರದ ಮೇಲೆ ಕಾರ್ಯಾಚರಣೆ ಮಾಡುತ್ತಿದ್ದು, 500 ಎಲೆಕ್ಟ್ರಿಕ್ ಬಸ್‍ಗಳ ಕಾರ್ಯಾಚರಣೆಗೆ 100 ಕೋಟಿ ರೂ. ಆರ್ಥಿಕ ನೆರವು ನೀಡಲು ಅನುಮೋದನೆಯಾಗಿದೆ. ಇದರಲ್ಲಿ ಪ್ರತಿ ಬಸ್‍ಗೆ ಕೈಗಾರಿಕೆ ಇಲಾಖೆ ಜೊತೆಗೆ ರಾಜ್ಯ ಸರ್ಕಾರದ ಆಯವ್ಯಯದಲ್ಲಿ 33 ಲಕ್ಷ ರೂ. ಸೇರಿದಂತೆ ಪ್ರತಿ ಬಸ್‍ಗೆ 88.33 ಕೋಟಿ ರೂ. ಆಗಲಿದೆ ಎಂದು ವಿವರಿಸಿದರು.
ಒಂದು ತಿಂಗಳ ಕಾಲ ಈ ಬಸ್ ಪ್ರಾಯೋಗಿಕ ಸಂಚಾರ ಮಾಡಲಿದ್ದು, 34 +1 ಪ್ರಯಾಣಿಕರ ಆಸನಗಳನ್ನು ಹೊಂದಿದೆ. ಬಿಎಂಟಿಸಿ ಪ್ರಾಯೋಗಿಕವಾಗಿ ಚಾಲನೆಗೊಳಪಡಿಸಿದ ಓಲೆಕ್ಟ್ರಾ ಎಲೆಕ್ಟ್ರಿಕ್ ಬಸ್ 12 ಮೀಟರ್ ಉದ್ದದ 400 ಮೀಟರ್ ಎತ್ತರದ ಬಸ್ ಆಗಿದ್ದು, ಆಟೋಮೆಟಿಕ್ ಗೇರ್ ವ್ಯವಸ್ಥೆಯನ್ನು ಹೊಂದಿದೆ. ಒಮ್ಮೆ ಚಾರ್ಜ್ ಮಾಡಿದರೆ ಹವಾನಿಯಂತ್ರಣದೊಂದಿಗೆ ಟ್ರಾಫಿಕ್ ದಟ್ಟಣೆ ನಡುವೆ ಈ ಬಸ್ 200ರಿಂದ 250 ಕಿ.ಮೀ ಸಂಚರಿಸಲು ಶಕ್ತವಾಗಿದೆ.
ಒಮ್ಮೆಗೆ 100ರಿಂದ 125 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮಥ್ರ್ಯದ ಈ ಬಸ್‍ಗೆ ಪದೇ ಪದೇ ಚಾರ್ಜಿಂಗ್ ಅಗತ್ಯವಿಲ್ಲ. ಇದರಿಂದ ಬಸ್ ಸೇವೆ ಬಿಎಂಟಿಸಿಗೆ ಲಾಭಕರವಾಗಲಿದೆ. ಅಲ್ಲದೆ ಹಿರಿಯ ನಾಗರೀಕರಿಗೆ ವ್ಹೀಲ್ ಚೇರ್ ವ್ಯವಸ್ಥೆಯನ್ನೂ ಹೊಂದಿದೆ. ಸಿಎಂವಿಆರ್ ನಿಬಂಧನೆಗಳಿಗೆ ಅನುಗುಣವಾಗಿ ನಿರ್ಮಾಣವಾಗಿರುವ ಓಲೆಕ್ಟ್ರಾ ಮೊಬೈಲ್‍ಗಳ ಚಾರ್ಜಿಂಗ್‍ಗೆ ಯೂಎಸ್‍ಬಿ ಚಾರ್ಜಿಂಗ್ ಅವಕಾಶ, ಎಮೆರ್ಜೆನ್ಸಿ ಅಲಾರಾಮ್, ನಿಲುಗಡೆ ಬಟನ್, ಪ್ರಥಮ ಚಿಕಿತ್ಸಾ ಕಿಟ್, ಗಾಜಿನ ಸುತ್ತಿಗೆಗಳು, ತುರ್ತು ನಿರ್ಗಮನಕ್ಕೆ ಅವಕಾಶ ಸೇರಿದಂತೆ ಎಲ್ಲ ಸುರಕ್ಷತಾ ವ್ಯವಸ್ಥೆಯೊಂದಿಗಿನ ಹೈಟೆಕ್ ಬಸ್ ಆಗಿದೆ.
ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಬ್ಯಾಟರಿ ತಂತ್ರಜ್ಞಾನ ಹೊರತಾಗಿ ಸಂಪೂರ್ಣ ದೇಶಿಯವಾಗಿ ನಿರ್ಮಿತವಾಗಿರುವ ಓಲೆಕ್ಟ್ರಾ ಎಲೆಕ್ಟ್ರಿಕ್ ಬಸ್ ಎಲೆಕ್ಟ್ರಾನಿಕ್ ನಿಯಂತ್ರಿತ ಏರ್ ಸಸ್ಪೆನ್ಷನ್ ಹೊಂದಿದೆ. ಟ್ರಾಕ್ಷನ್ ಬ್ಯಾಟರಿಯ ಕೂಲೆಂಟ್ ಮೆಕಾನಿಸಂ ಹೊಂದಿರುವ ಲಿ-ಅಯಾನ್‍ದಾಗಿದೆ. ಇದರಿಂದ ಬ್ಯಾಟರಿ ತಾಪಮಾನ ನಿಯಂತ್ರಿಸುವ ಮೂಲಕ ಹೆಚ್ಚಿನ ಮೈಲೇಜ್ ಸಾಧ್ಯವಾಗಲಿದೆ.
ಹೈಟೆಕ್ ಮತ್ತು ಆಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಾಣವಾಗಿರುವ ಓಲೆಕ್ಟ್ರಾ ಎಲೆಕ್ಟ್ರಿಕ್ ಬಸ್‍ಗಳು ಸಮೂಹ ಸಾರಿಗೆಗೆ ಒತ್ತು ನೀಡಲಿದೆ. ಪರಿಸರ ಸ್ನೇಹಿ ಓಲೆಕ್ಟ್ರಾ ಬಸ್‍ಗಳ ಸಂಚಾರದಿಂದ ನಾಲ್ಕು ಚಕ್ರ ವಾಹನಗಳ ಸಂಚಾರ ಕಡಿಮೆ ಆಗಲಿದೆ ಮತ್ತು ಇಂಧನ ಬಳಕೆಯಲ್ಲಿ ಗಣನೀಯ ಇಳಿಕೆ ಸಾಧ್ಯವಾಗಲಿದೆ. ಕಾರ್ಬನ್ ಅನಿಲಕ್ಕೆ ಕಡಿವಾಣ ಹಾಕಬಹುದಾಗಿದೆ ಎಂದು ಓಲೆಕ್ಟ್ರಾ ಬಸ್ ಒದಗಿಸಿರುವ ಸಂಸ್ಥೆ ತಿಳಿಸಿದೆ.
ಈ ಸಂದರ್ಭದಲ್ಲಿ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ನಿರ್ದೇಶಕರಾದ ಡಾ.ಅರುಣ್, ಸಂತೋಷ್ ಬಾಬು ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.