ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷ ಜ. 1ರಂದು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಸಾರ್ವಜನಿಕರ ದರ್ಶನಕ್ಕೆ ಮುಕ್ತವಾಗಲಿದೆ. ನಂತರದಲ್ಲಿ ದಿನಕ್ಕೆ ಕನಿಷ್ಠ 1 ಲಕ್ಷ ಮಂದಿಯಾ ದರೂ ಶ್ರೀರಾಮನ ದರ್ಶನ ಪಡೆಯಲಿದ್ದಾರೆ. ಇದನ್ನು ಗಮನದಲ್ಲಿಟ್ಟು ಕೊಂಡು, ಅಯೋಧ್ಯೆಯನ್ನು ಜಾಗತಿಕ ಪ್ರವಾಸೋದ್ಯಮ ಮತ್ತು ಆಧ್ಯಾತ್ಮಿಕ ಕೇಂದ್ರವನ್ನಾಗಿ ಮಾರ್ಪಾಡು ಮಾಡುವ ಉದ್ದೇಶದಿಂದ ಉತ್ತರಪ್ರದೇಶ ಸರಕಾರವು ಬರೊಬ್ಬರಿ 32 ಸಾವಿರ ಕೋಟಿ ರೂ.ಗಳ ಮೆಗಾ ಯೋಜನೆಯನ್ನು ರೂಪಿಸಿದೆ.
ಆ ಯೋಜನೆ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.
ಏನಿದು ಮೆಗಾ ಯೋಜನೆ?
ಒಂದು ಕಡೆ ದೇಣಿಗೆಯ ಮೊತ್ತದಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದ್ದರೆ, ಮತ್ತೂಂದು ಕಡೆ 32 ಸಾವಿರ ಕೋಟಿ ರೂ. ವೆಚ್ಚದಲ್ಲಿ ಇಡೀ ಅಯೋಧ್ಯೆಯ ನೋಟವನ್ನೇ ಬದಲಿಸುವ ಕೆಲಸ ಆರಂಭವಾಗಲಿದೆ. ಹೆದ್ದಾರಿಗಳು, ರಸ್ತೆಗಳು, ಮೂಲಸೌಕರ್ಯ, ಟೌನ್‌ಶಿಪ್‌ಗಳು, ಭವ್ಯವಾದ ಪ್ರವೇಶ ದ್ವಾರಗಳು, ಬಹುಹಂತದ ಪಾರ್ಕಿಂಗ್ ವ್ಯವಸ್ಥೆ, ಹೊಸ ವಿಮಾನನಿಲ್ದಾಣಗಳು ಸಹಿತ ಒಟ್ಟು 264 ಕಾಮಗಾರಿಗಳನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಈ ಪೈಕಿ 143 ಯೋಜನೆಗಳನ್ನು “ಆದ್ಯತೆಯ ಪ್ರಾಜೆಕ್ಟ್ ‘ಗಳೆಂದು ಗುರುತಿಸಿ, ದೇಗುಲದ ಉದ್ಘಾಟನೆ ವೇಳೆ ಅಂದರೆ 2024ರೊಳಗಾಗಿ ಪೂರ್ಣಗೊಳಿಸಲಾಗುವುದು.
ಉದ್ದೇಶವೇನು?
ಅಯೋಧ್ಯೆಯನ್ನು ಜಾಗತಿಕ ಪ್ರವಾಸಿ, ಆಧ್ಯಾತ್ಮಿಕ ತಾಣವಾಗಿ ಅಭಿವೃದ್ಧಿಪಡಿಸುವುದು
ಬ್ರ್ಯಾಂಡ್ ಅಯೋಧ್ಯೆಯ ಭಾಗವಾಗಿ ಸುಸ್ಥಿರ ಸ್ಮಾರ್ಟ್ ಸಿಟಿಯನ್ನಾಗಿ ರೂಪಿಸುವುದು
ವೈದಿಕ ಟೌನ್‌ಶಿಪ್, ಹೊಸ ಅಂತಾರಾಷ್ಟ್ರೀಯ ವಿಮಾನನಿಲ್ದಾಣ, ಆಧುನಿಕ ರೈಲು ನಿಲ್ದಾಣ, ಸರಯೂ ನದಿ ಅಭಿವೃದ್ಧಿ, ಐತಿಹಾಸಿಕ ಸಿಟಿ ಸರ್ಕ್ನೂಟ್, ಹೆರಿಟೇಜ್ ವಾಕ್ ಸೌಲಭ್ಯ ಕಲ್ಪಿಸುವುದು
32,000 ಕೋಟಿ ರೂ. ಅಯೋಧ್ಯೆ ಅಭಿವೃದ್ಧಿಯ ಮೆಗಾ ಯೋಜನೆ ವೆಚ್ಚ
264 ಈ ಬೃಹತ್ ಪ್ರಾಜೆಕ್ಟ್ ಯೋಜನೆಗಳನ್ನು ಒಳಗೊಂಡಿದೆ.
10 ಈ ಯೋಜನೆಗಾಗಿ ಕೈಗೊಂಡ ರಾಷ್ಟ್ರೀಯ, ಅಂತಾ ರಾಷ್ಟ್ರೀಯ ಅಧ್ಯಯನಗಳು
37 ಸಂಸ್ಥೆಗಳಿಂದ ಈ ಕಾಮಗಾರಿ
1,800 ಕೋಟಿ ರೂ. ರಾಮ ಮಂದಿರ ನಿರ್ಮಾಣದ ವೆಚ್ಚ
1,000 ವರ್ಷಗಳು ಮಂದಿರದ ಬಾಳಿಕೆ ಅವಧಿ
ಪ್ರತಿದಿನ ಎಷ್ಟು ಮಂದಿ ಭೇಟಿ ನೀಡಬಹುದು? 1 ಲಕ್ಷ
10 ಕೋಟಿ 2047ರ ವೇಳೆಗೆ ವಾರ್ಷಿಕ ಭಕ್ತರ ಸಂಖ್ಯೆ ಅಂದಾಜು