ಬೆಳೆಯುವ ಪೈರು ಮೊಳಕೆ ಯಲ್ಲೇ ಎಂಬಂತೆ ಮಕ್ಕಳ ಪ್ರತಿಭೆ ಕಿರುವಯಸ್ಸಿನಲ್ಲೇ ಪರಿಚಿತ ವಾಗುತ್ತದೆ ಅದಕ್ಕೆ ನಿದರ್ಶನ ಬೆಂಗಳೂರಿನ ಆರು ವರ್ಷದ ಬಾಲೆ ನಿಖಿತ. ಇಷ್ಟು ಸಣ್ಣ ವಯಸ್ಸಿನಲ್ಲೇ ಯೋಗದಲ್ಲಿ ನೋಬೆಲ್ ವರ್ಡ್‍ರೆಕಾರ್ಡ್ ಮಾಡುವ ಮೂಲಕ ತನ್ನಅಸಾಧಾರಣ ಪ್ರತಿಭೆ ಮೆರೆದ ಪೋರಿಗೆ ಯೋಗವೆಂದರೆ ಅಚ್ಚುಮೆಚ್ಚು.
ಈ ಸಣ್ಣ ವಯಸ್ಸಿನಲ್ಲಿ ಅತ್ಯಂತ ಕ್ಲಿಷ್ಟಕರವಾದ ಆಸನಗಳಾದ ಗಂಡಬೇರುಂಡಾಸನ, ಪೂರ್ಣಶಲ ಭಾಸನ, ಮಯೂರಾಸನ, ದೀಪಾಸನ,ಚಕ್ರಬಂಧಾಸನದಂತಹ ಹಲವು ಆಸನ ಕ್ರಿಯೆಗಳನ್ನು ಸಲೀಸಾಗಿ ಮಾಡುವ ನಿಖಿತಾ ಈ ಸಾಧನೆಯಿಂದ ನೋಬೆಲ್ ವರ್ಡ್‍ರೆಕಾರ್ಡ್‍ಗೆ ಭಾಜನಳಾಗಿದ್ದಾಳೆ.
ಅಂತಾರಾಷ್ಟ್ರೀಯಯೋಗ ಸ್ಪರ್ಧೆಯಲ್ಲೂ ಪಾಲ್ಗೊಳ್ಳಲು ನಿಖಿತ ಸಜ್ಜಾಗಿದ್ದರೂ ಕೊರೋನಾದಿಂದಾಗಿ ಕಳೆದ ಮೇ17 ರಂದು ಕೆನಡಾದಲ್ಲಿ ನಡೆಯಬೇಕಿದ್ದ ಸ್ಪರ್ಧೆ ರದ್ದಾಗಿತ್ತು. ಇದೀಗ ನೋಬೆಲ್ ವರ್ಡ್ ರೆಕಾರ್ಡ್‍ನಲ್ಲಿ ದಾಖಲೆ ಮಾಡಿದ್ದಾಳೆ ಈ ಬಾಲಕಿ.
ಉತ್ತರ ಹಳ್ಳಿಯ ಇಂಟರ್ ನ್ಯಾಷನಲ್‍ಕಿಡ್ಸ್ ಹೈ ಶಾಲೆಯಲ್ಲಿ ಒಂದನೇ ತರಗತಿ ಓದುತ್ತಿರುವ ಈ ಬಾಲೆ ಯೋಗವನ್ನು ಕಳೆದ 3 ವರ್ಷಗಳಿಂದ ಅಭ್ಯಾಸ ಮಾಡುತ್ತಾ ಬಂದಿದ್ದು, ತಂದೆಯೆ ಈಕೆಗೆ ಗುರು, ಮಾರ್ಗದರ್ಶಿ ಎಲ್ಲಾ. ಬಿಎಂಟಿಸಿಯಲ್ಲಿ ನಿರ್ವಾಹಕರಾಗಿ (ಕಂಡಕ್ಟರ್) ಕೆಲಸ ನಿರ್ವಹಿಸುತ್ತಿರುವ ಸತೀಶ್ ಮತ್ತು ಪತ್ನಿ ಭಾಗ್ಯಶ್ರೀ ಇಬ್ಬರೂಯೋಗ ಕಲಿತು ಇತರರಿಗೂ ಕಲಿಸಿ ಕೊಡುವ ಗುರುಗಳಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ
ಪ್ರತಿದಿನ ತಂದೆ ಮಾಡುವ ಯೋಗವನ್ನು ಕಂಡು ತಾನು ಅಭ್ಯಾಸ ಮಾಡಲು ಮುಂದಾದ ನಿಖಿತಾಗೆ ತಂದೆಯೇ ಹೇಳಿಕೊಡಬೇಕು. ಪ್ರತಿದಿನ ಬೆಳಗ್ಗೆ 3ಗಂಟೆಗೆ ಏಳುವ ಈ ಪುಟಾಣಿ ಯೋಗ ಕ್ರಿಯೆ ನೌಲಿ ಅಭ್ಯಾಸ ಮಾಡಿ, ನಂತರ ಮೆಡಿಟೇಷನ್ ಮುಗಿಸಿ ಆಸನಗಳನ್ನು ಒಂದೊಂದಾಗಿ ಪೂರ್ಣಗೊಳಿಸುವ ವೇಳೆಗೆ 7 ಗಂಟೆಯಾಗಿರುತ್ತದೆ.
ಈ ರೀತಿ ತಂದೆಯೊಂದಿಗೆ ದಿನಚರಿ ಆರಂಭಿಸಿ ನಂತರ ಹೆಚ್ಚಿನ ಸಮಯವನ್ನು ತನ್ನ ಪುಸ್ತಕ ಪೆನ್ಸಿಲ್‍ಅಥವಾ ಪೆನ್ನು ಹಿಡಿದು ಚಿತ್ರಕಲೆ ಮತ್ತಿತರ ಚಟುವಟಿಕೆಯಲ್ಲಿ ಕಾಲ ಕಳೆಯುತ್ತಾಳೆ.ಇತರೆ ಮಕ್ಕಳಂತೆ ಆಟಕ್ಕೆ ಓಡಬೇಕುಎಂದು ಹಾತೊರೆಯುವ ಮಕ್ಕಳಿಗಿಂತ ಭಿನ್ನವಾಗಿರುವ ಈ ಬಾಲಕಿ ವಿದ್ಯಾಭ್ಯಾಸದಲ್ಲೂ ಹಿಂದೆ ಬಿದ್ದಿಲ್ಲ.
ಈಕೆಯ ತಂದೆ ಸತೀಶ್‍ಅವರು ಹೇಳುವಂತೆ ಯೋಗ ಮೊದಲಿಗೆ ಆರೋಗ್ಯದೃಷ್ಟಿ, ದೊಡ್ಡವರನ್ನುಗೌರವಿಸುವುದನ್ನು ಕಲಿಸುತ್ತದೆ. ಶಾಂತಿ ವಾತಾವರಣ ಮೂಢಿಸಿ, ಪ್ರೀತಿಯಿಂದ ಎಲ್ಲರೊಂದಿಗೆ ಬೆರೆಯುವುದನ್ನು ಕಲಿಸುತ್ತದೆ. ಮಕ್ಕಳ ಬೆಳವಣಿಗೆಗೂ ಪೂರಕವಾಗುವ ಯೋಗವನ್ನು ಸತೀಶ್ ದಂಪತಿ ತಮ್ಮ ಮಗಳಿಗೂ ಕಲಿಸಿ ಮತ್ತು ಯೋಗದಲ್ಲಿನ ಅತ್ಯುತ್ತಮ ಸಾಧನೆಗೂ ಪ್ರೇರೇಪಿಸಿ ಆಕೆಯ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಿದ್ದಾರೆ. ಪುಟ್ಟ ಬಾಲೆ ನಿಖಿತಾ ಇಂತಹ ಹಲವು ರೆಕಾರ್ಡ್ ಮಾಡಲಿ ಎಂದು ಹಾರೈಸೋಣ.