ಬೆಳಗಾವಿ: ಸವದತ್ತಿ ಯಲ್ಲಮ್ಮ ಕ್ಷೇತ್ರದ ಶಾಸಕ, ವಿಧಾನಸಭೆ ಉಪಸಭಾಪತಿ ಆನಂದ ಚಂದ್ರಶೇಖರ ಮಾಮನಿ ಅವರು ಅನಾರೋಗ್ಯದಿಂದ ಶನಿವಾರ ರಾತ್ರಿ ಕೊನೆಯುಸಿರೆಳೆದರು.
ಅನಾರೋಗ್ಯದಿಂದ ಬಳಲುತ್ತಿದ್ದ ಅನಂದ ಮಾಮನಿ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅನೇಕ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ. ರವಿವಾರ ಪಾರ್ಥಿವ ಶರೀರ ತವರು ಜಿಲ್ಲೆಗೆ ಆಗಮಿಸಲಿದೆ.
ಶಾಸಕ ಆನಂದ ಮಾಮನಿ ನಿಧನದಿಂದ ಜಿಲ್ಲೆಯಾದ್ಯಂತ ಶೋಕ ಮಡುಗಟ್ಟಿದ್ದು, ಹಿರಿಯ ರಾಜಕೀಯ ನೇತಾರನನ್ನು ಕಳೆದುಕೊಂಡ ಜಿಲ್ಲೆ ಬಡವಾಗಿದೆ. ಆನಂದ ಮಾಮನಿ ಆರೋಗ್ಯದಲ್ಲಿ ಏರುಪೇರು ಆದಾಗ ಚೆನ್ನೈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ಸುದ್ದಿ ಹರಿದಾಡಿದಾಗ, ಸ್ವತಃ ಆನಂದ ಮಾಮನಿ ವಿಡಿಯೋ ಮಾಡಿ, ಆರೋಗ್ಯವಾಗಿ ಇರುವುದಾಗಿ ಹೇಳಿಕೆ ನೀಡಿದ್ದರು. ನಂತರ ಇವರನ್ನು ಬೆಂಗಳೂರು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಸವದತ್ತಿ ಯಲ್ಲಮ್ಮ ಕ್ಷೇತ್ರದಿಂದ 2008, 2013 ಹಾಗೂ 2018ರಲ್ಲಿ ಸತತ ಮೂರು ಬಾರಿ ಭಾರತೀಯ ಜನತಾ ಪಾರ್ಟಿಯಿಂದ ಜಯಶಾಲಿಯಾಗಿದ್ದರು. ಆನಂದ ಮಾಮನಿ ಅವರ ಕುಟುಂಬಕ್ಕೆ ರಾಜಕೀಯ ಹಿನ್ನೆಲೆ ಬಹಳಷ್ಟಿದೆ.ಆನಂದ ಮಾಮನಿ ಕುಟುಂಬಸ್ಥರು ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ 6 ಬಾರಿ ಗೆದ್ದು ಜನ ಸೇವೆ ಮಾಡಿದ್ದಾರೆ. ಇವರ ತಂದೆ ಚಂದ್ರಶೇಖರ ಮಾಮನಿ 1998ರಲ್ಲಿ ವಿಧಾನಸಭೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇದೀಗ ತಂದೆಯವರು ನಿಭಾಯಿಸಿದ್ದ ಹುದ್ದೆ ಪಡೆದುಕೊಳ್ಳುವಲ್ಲಿ ಆನಂದ ಮಾಮನಿ ಯಶಸ್ವಿಯಾಗಿದ್ದಾರೆ.