ವಿಜಯಪುರ: ಜಿಲ್ಲೆಗೂ ಸಾವರ್ಕರ್ ವಿವಾದದ ಕಿಡಿ ಹರಡಿದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ನಡೆದ ನಗರದ ಗಜಾನನ ಮಹಾಮಂಡಳದ ಸಭೆಯ ವೇದಿಕೆಗೆ ಸಾವರ್ಕರ್ ಎಂದು ಹೆಸರು ಇರಿಸಿದ್ದರೆ, ಇದರ ಬೆನ್ನಲ್ಲೇ ಕಾಂಗ್ರೆಸ್ ಕಛೇರಿಗೆ ಅಪರಿಚಿತ ವ್ಯಕ್ತಿ ಸಾವರ್ಕರ್ ಫೋಟೋ ಅಂಟಿಸುವ ಮೂಲಕ ಜಿಲ್ಲೆಯಲ್ಲೂ ವಿವಾದ ತಾರಕಕ್ಕೆ ಏರುವಂತೆ ಮಾಡಿದ್ದಾರೆ.
ನಗರದ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿನ ಡಾ.ಫ.ಗು. ಹಳಕಟ್ಟಿ ಭವನದಲ್ಲಿ ನಗರ ಶಾಸಕ ಯತ್ನಾಳ ನೇತೃತ್ವದಲ್ಲಿ ನಡೆದ ಶ್ರೀ ಗಜಾನನ ಮಹಾಮಂಡಳ ಸಭೆಯ ವೇದಿಕೆಗೆ ವೀರಸಾವರ್ಕರ್ ಹೆಸರಿಡಲಾಗಿದೆ.
ನಗರದಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಕುರಿತು ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದ ಸಭೆ ಇದಾಗಿತ್ತು. ಇದರ ಬೆನ್ನಲ್ಲೇ ನಗರದ ಜಲನಗರ ಪರಿಸರದಲ್ಲಿ ಇರುವ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ವೀರಸಾವರ್ಕರ್ ಫೋಟೋ ಅಂಟಿಸಲಾಗಿದೆ.
ಅಪರಿಚಿತ ವ್ಯಕ್ತಿಗಳು ಭಾನುವಾರ ತಡರಾತ್ರಿ ಕಾಂಗ್ರೆಸ್ ಕಚೇರಿಯ ಪ್ರವೇಶ ದ್ವಾರ, ಕಿಟಕಿ ಹಾಗೂ ಗೋಡೆ ಸೇರಿದಂತೆ ವಿವಿಧ ಕಡೆಗಳ ಸಾವರ್ಕರ್ ಫೋಟೋ ಅಂಟಿಸಿದ್ದಾರೆ. ವಿಷಯ ತಿಳಿಯುತ್ತಲೇ ಕಾಂಗ್ರೆಸ್ ಕಚೇರಿಗೆ ಆಗಮಿಸಿರುವ ಜಲನಗರ ಪೊಲೀಸರು, ಸಾವರ್ಕರ್ ಫೋಟೋ ತೆರವು ಮಾಡಿದ್ದಾರೆ.
ಮತ್ತೊಂದೆಡೆ ಸಾವರ್ಕರ್ ಕುರಿತು ಟೀಕಾತ್ಮಕ ಹೇಳಿಕೆ ನೀಡಿದ್ದಾರೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಘಟನೆ ಖಂಡಿಸಿ, ನಗರದ ಮಹಾತ್ಮಾ ಗಾಂಧೀಜಿ ವೃತ್ತದಲ್ಲಿ ಸೋಮವಾರ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿದೆ.