ನಮ್ಮ ಅಂದಾಜಿನ ಪ್ರಕಾರ ಬೆಳಗಾವಿಯ ಗಾಲ್ಫ ಮೈದಾನದಲ್ಲಿ ಪತ್ತೆಯಾಗಿದ್ದ ಚಿರತೆ ಅರಣ್ಯ ಪ್ರದೇಶಕ್ಕೆ ಹೋಗಿರುವ ಸಾಧ್ಯತೆಯಿದೆ. ಆದರೆ ಅದು ಮರಳಿ ಬರಬಹುದು ಅಥವಾ ಮತ್ತೆ ಕಾಣಿಸಿಕೊಳ್ಳಬಹುದು ಎಂಬ ಹಿನ್ನೆಲೆ ನಾವು ಕಾರ್ಯಾಚರಣೆ ಮುಂದುವರಿಸಿದ್ದೇವೆ ಎಂದು ಡಿಎಫ್‍ಓ ಡಾ.ಅಂಟೋನಿ ಮರಿಯಂ ಸ್ಪಷ್ಟಪಡಿಸಿದ್ದಾರೆ.
ಹೌದು ಬೆಳಗಾವಿಯ ಗಾಲ್ಫ ಮೈದಾನದಲ್ಲಿ ಚಿರತೆ ಪತ್ತೆಯಾಗಿರುವ ಹಿನ್ನೆಲೆ ಕುಂದಾನಗರಿ ಜನ ತೀವ್ರ ಭಯಭೀತರಾಗಿದ್ದರು. ಇನ್ನು ಅರಣ್ಯ ಇಲಾಖೆ ಕೂಡ ಸತತ ಕಾರ್ಯಾಚರಣೆ ನಡೆಸಿದರೂ ಚಿರತೆ ಮಾತ್ರ ಸೆರೆಯಾಗಿರಲಿಲ್ಲ. ಈ ಸಂಬಂಧ ಸಾರ್ವಜನಿಕರು ಸಾಕಷ್ಟು ಗೊಂದಲಕ್ಕೆ ಒಳಗಾಗಿದ್ದರು.
ಈ ಸಂಬಂಧ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಡಿಎಫ್‍ಓ ಡಾ.ಅಂಟೋನಿ ಮರಿಯಂ ಅವರು ಆಗಸ್ಟ್ 8ರಂದು ಗಾಲ್ಫ ಮೈದಾನದಲ್ಲಿ ಚಿರತೆಯ ದೃಶ್ಯ ಸಿಸಿಕ್ಯಾಮರಾದಲ್ಲಿ ಪತ್ತೆಯಾಗಿತ್ತು. ಅಲ್ಲಿಂದ ಈವರೆಗೂ ನಮ್ಮ 23 ಸಿಸಿಕ್ಯಾಮರಾದಲ್ಲಿ ಎಲ್ಲಿಯೂ ಚಿರತೆ ಪತ್ತೆಯಾಗಿಲ್ಲ. ಮಿಲಿಟರಿ ಪ್ರದೇಶ ಕೂಡ ಅರಣ್ಯ ಪ್ರದೇಶದಂತೆಯೇ ಇದೆ. ಇದು ಮುಂದೆ ಖಾನಾಪುರ ಅರಣ್ಯಕ್ಕೆ ಹೋಗಿ ಸೇರುತ್ತದೆ. ನಮ್ಮ ಲೆಕ್ಕಾಚಾರ ಪ್ರಕಾರ ಚಿರತೆ ಕಾಡನ್ನು ಪ್ರವೇಶ ಮಾಡಿದೆ. ಆದರೆ ಸುರಕ್ಷತೆ ದೃಷ್ಟಿಯಿಂದ ಇಂದು ಕೂಡ ನಾವು ಕಾರ್ಯಾಚರಣೆ ಮುಂದುವರಿಸಿದ್ದೇವೆ.
ಯಥಾವತ್ತಾಗಿ ಇನ್ನು ಒಂದು ವಾರವಾದ್ರೂ ಕಾರ್ಯಾಚರಣೆ ಮುಂದುವರಿಸುತ್ತೇವೆ. ಗಾಲ್ಫ ಮೈದಾನ ಸುಮಾರು 200 ಏಕರೆ ಪ್ರದೇಶವಿದೆ. ಅದರ ಪಕ್ಕದಲ್ಲಿಯೇ ಮಿಲಿಟರಿ ಪ್ರದೇಶ ಬರುತ್ತದೆ. ಇದೆಲ್ಲಾ ಅರಣ್ಯದಂತೆ ಇದೆ. ಇನ್ನು 6 ಸದಸ್ಯರ ಒಟ್ಟು 8 ತಂಡಗಳು ಏಕಕಾಲಕ್ಕೆ ಕಾರ್ಯಾಚರಣೆ ನಡೆಸುತ್ತಿವೆ. ಒಂದು ಕಡೆ ಕಾರ್ಯಾಚರಣೆ ಮಾಡಿ ಮತ್ತೊಂದು ಕಡೆ ಬಿಟ್ಟರೆ ಚಿರತೆ ಪಾರಾಗುವ ಸಾಧ್ಯತೆ ಇರುತ್ತದೆ ಎಂದು ವಿವರಿಸಿದರು.